ಆನ್‌ಲೈನ್ ಮೂಲಕ ರೇಶನ್ ಕಾರ್ಡ್ ವಿತರಣೆಗೆ ಚಾಲನೆ
ಬೆಂಗಳೂರು, ಜ.31: ಕರ್ನಾಟಕವನ್ನು ಹಸಿವು ಮುಕ್ತ ಮಾಡುವ ಉದ್ದೇಶದಿಂದ ಸರಕಾರವು ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಆನ್‌ಲೈನ್ ಅರ್ಜಿ ಮೂಲಕ ಹೊಸ ಪಡಿತರ ಚೀಟಿ ವಿತರಣೆ, ಪ್ರತಿ ಪಡಿತರ ಚೀಟಿದಾರರಿಗೆ ಒಂದು ಕೆ.ಜಿ. ಬೇಳೆಕಾಳು ಹಾಗೂ ನ್ಯಾಯಬೆಲೆ ಅಂಗಡಿಗಳಲ್ಲೇ ಕೂಪನ್ ವಿತರಣೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಬಹಳಷ್ಟು ಮಂದಿ ಪೌಷ್ಟಿಕಾಂಶ ಕೊರತೆ ಎದುರಿಸುತ್ತಿದ್ದಾರೆ. ಹೀಗಾಗಿ ಪೌಷ್ಟಿಕಾಂಶಯುಕ್ತ ತೊಗರಿ ಬೇಳೆಯನ್ನು ಫಲಾನುಭವಿಗಳಿಗೆ ಅರ್ಧ ಬೆಲೆಗೆ ನೀಡಲು ತೀರ್ಮಾನಿಸಲಾಗಿದೆ. ಮಕ್ಕಳಿಗೆ ಶಾಲೆಗಳಲ್ಲಿ ಹಾಲು ಕೊಡುತ್ತಿರುವುದರಿಂದ ಪೌಷ್ಟಿಕಾಂಶ ಕೊರತೆ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.
ವಿಳಂಬ ತಪ್ಪಿಸುವ ಉದ್ದೇಶದಿಂದ ಆನ್‌ಲೈನ್ ಮೂಲಕ ಪಡಿತರ ಚೀಟಿ ವಿತರಿಸುವ ಸೌಲಭ್ಯ ಒದಗಿಸಲಾಗುತ್ತಿದೆ. ಆನ್‌ಲೈನ್ ಮೂಲಕಅರ್ಜಿ ಸಲ್ಲಿಸಿದರೆ 15 ದಿನದಲ್ಲಿ ಪಡಿತರ ಚೀಟಿ ಸಿಗಲಿದೆ ಎಂದರು.
ಅರ್ಹ ಪಡಿತರ ಫಲಾನುಭವಿಗಳಿಗೆ ಪಡಿತರದ ಬದಲು ಹಣ ನೀಡುವ ಪ್ರಸ್ತಾವವನ್ನು ಕೈಬಿಡಲಾಗಿದೆ. ಈಗ ಇರುವ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕಾರ್ಯಕ್ರಮದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಮತ್ತಿತರರು ಉಪಸ್ಥಿತರಿದ್ದರು.