ಬನ್ನೇರುಘಟ್ಟದಲ್ಲಿ ಪ್ರವಾಸಿಗರ ಕಾರಿನ ಮೇಲೆರಗಿದ ಸಿಂಹಗಳು!
ಬೆಂಗಳೂರು, ಫೆ.1: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರವಾಸಿಗಳನ್ನು ಕರೆದೊಯ್ಯುತ್ತಿದ್ದ ಐಷಾರಾಮಿ ವಾಹನದ ಮೇಲೆ ಸಿಂಹಗಳು ದಾಳಿ ಮಾಡಿದ ಘಟನೆ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ. ಅಧಿಕ ಮೊತ್ತದ ಟಿಕೆಟ್ ಖರೀದಿಸುವ ವಿಲಾಸಿ ಪ್ರವಾಸಿಗರಿಗಾಗಿ ವಿಶೇಷವಾಗಿ ವ್ಯವಸ್ಥೆ ಮಾಡಿರುವ ಟೊಯಾಟೊ ಇನ್ನೋವಾ ವಾಹನದ ಮೇಲೆ ಸಿಂಹಗಳು ದಾಳಿ ಮಾಡುತ್ತಿರುವುದು ಇದು ಎರಡನೆ ಬಾರಿ.
ಸಿಂಹಗಳು ದಾಳಿ ಮಾಡುತ್ತಿರುವ ವೀಡಿಯೋವನ್ನು ಕೆಲ ಸ್ಥಳೀಯ ಟಿವಿ ಚಾನಲ್‌ಗಳು ಮಂಗಳವಾರ ಪ್ರಸಾರ ಮಾಡಿವೆ. ಇನ್ನೋವಾ ವಾಹನದ ಹಿಂದಿದ್ದ ಸಫಾರಿಯ ಚಾಲಕ ಈ ವಿಡಿಯೊ ಚಿತ್ರೀಕರಣ ಮಾಡಿದ್ದಾನೆ. ಈ ದೃಶ್ಯಾವಳಿಯ ಪ್ರಕಾರ, ಇನ್ನೋವಾ ವಾಹನದ ತೀರಾ ಸಮೀಪಕ್ಕೆ ಬಂದ ಎರಡು ಸಿಂಹಗಳ ಪೈಕಿ ಒಂದು ಸಿಂಹವನ್ನು ಮನವೊಲಿಸಿದ ಬಳಿಕ ವಾಹನಕ್ಕೆ ಮೊದಲು ರಸ್ತೆ ದಾಟಿ ಹೋಗಲು ಮುಂದಾಯಿತು. ಆದರೆ ಮತ್ತೊಂದು ಸಿಂಹ, ವಾಹನದ ಮೇಲಕ್ಕೆ ಹತ್ತಿ ಹಿಂದಿನ ಬದಿಯ ಗಾಜಿನ ಮೇಲೆ ದಾಳಿ ಮಾಡುವ ಪ್ರಯತ್ನ ಮಾಡಿತು. ಪ್ರವಾಸಿಗರು ಭೀತಿಯಿಂದ ಕಿರುಚಿಕೊಳ್ಳುತ್ತಿರುವ ಧ್ವನಿ ಸ್ಪಷ್ಟವಾಗಿ ಕೇಳಿಸುತ್ತಿದೆ. ವಾಹನ ಮುಂದಕ್ಕೆ ಹೋಗುತ್ತಿದ್ದಂತೆ ಸಿಂಹ ಹೊರಟುಹೋಗಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಬನ್ನೇರುಘಟ್ಟ ಉದ್ಯಾನವನದ ಆಡಳಿತ ನಿರ್ದೇಶಕ ಸಂತೋಷ್ ಕುಮಾರ್ ಅವರು, ಸುರಕ್ಷತೆ ಬಗ್ಗೆ ಗಮನ ಹರಿಸದ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಜನವರಿ 28 ಅಥವಾ 29ರಂದು ಈ ದಾಳಿ ನಡೆದಿದೆ. ಇದು ಚಾಲಕನ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆ. ಆತ ಯಾವುದೇ ಕಾರಣಕ್ಕೆ ವಾಹನ ನಿಲ್ಲಿಸಬಾರದಿತ್ತು. ಪ್ರವಾಸಿಗರನ್ನು ಓಲೈಸುವ ಸಲುವಾಗಿ ಇಂಥ ಸಾಹಸ ಮಾಡಲಾಗಿದೆ. ಆತನನ್ನು ಸಫಾರಿ ಕರ್ತವ್ಯದಿಂದ ಕಿತ್ತುಹಾಕಲಾಗಿದೆ" ಎಂದು ಅವರು ಹೇಳಿದ್ದಾರೆ.
"ಸಾರ್ವಜನಿಕರನ್ನು ಹೊತ್ತೊಯ್ಯುವ ದೊಡ್ಡ ವಾಹನಗಳ ಗಾಜುಗಳಿಗೆ ಮೆಷ್ ಅಳವಡಿಸಲಾಗಿದೆ. ಆದರೆ ಚಿಕ್ಕ ವಾಹನಗಳಿಗೆ ಎಲ್ಲ ಬದಿಯಿಂದಲೂ ಮೆಷ್ ಅಳವಡಿಸುವುದು ಅಸಾಧ್ಯ. ಇನ್ನೊವಾ ವಾಹನದ ಎರಡೂ ಬದಿಗಳಿಗೆ ಮೆಷ್ ಅಳವಡಿಸಲಾಗಿದೆ. ಆದರೆ ಎದುರು ಹಾಗೂ ಹಿಂದಿನ ಗಾಜಿಗೆ ಅಳವಡಿಸಿಲ್ಲ. ಸಣ್ಣ ವಾಹನಗಳನ್ನು ಸೇವೆಯಿಂದ ತೆಗೆದು ಸಫಾರಿ ಬಸ್ಸುಗಳನ್ನಷ್ಟೇ ಉಳಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ" ಎಂದು ಅವರು ವಿವರಿಸಿದರು.