×
Ad

ಮೇಟಿ ಹಾಜರು-ಅಂಬಿ ಗೈರು

Update: 2017-02-06 20:37 IST

ಬೆಂಗಳೂರು, ಫೆ. 6: ರಾಸಲೀಲೆ ಆರೋಪಕ್ಕೆ ಗುರಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಸಾರ್ವಜನಿಕ ವಲಯದಿಂದ ದೂರವಿದ್ದ ಎಚ್.ವೈ.ಮೇಟಿ ಅವರು ವಿಧಾನಸಭೆ ಕಲಾಪದಲ್ಲಿ ಕಾಣಿಸಿಕೊಂಡರು. ಆದರೆ, ಸಚಿವ ಸ್ಥಾನ ಕಳೆದು ಕೊಂಡಿದ್ದರಿಂದ ಅಸಮಾಧಾನಗೊಂಡಿದ್ದ ಅಂಬರೀಶ್ ಗೈರು ಹಾಜರಿ ಕಲಾಪದಲ್ಲಿ ಎದ್ದು ಕಾಣುತ್ತಿತ್ತು.

ಸೋಮವಾರ ವಿಧಾನ ಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಅವರ ಭಾಷಣ ಆರಂಭಕ್ಕೆ ಕಲಾಪಕ್ಕೆ ಆಗಮಿಸಿದ ಎಚ್.ವೈ. ಮೇಟಿ ತಮ್ಮ ಆಸನದಲ್ಲಿ ಆಸೀನರಾಗಿ, ತದೇಕಚಿತ್ತದಿಂದ ರಾಜ್ಯಪಾಲರ ಭಾಷಣ ಆಲಿಸಿದರು.

ಕೇಸರಿ ಪೇಟಾ: ಬೆಳಗಾವಿ ಜಿಲ್ಲೆ ಖಾನಾಪುರ ಕ್ಷೇತ್ರದ ಎಂಇಎಸ್ ಸದಸ್ಯ ಅರವಿಂದ ಸಿ.ಪಾಟೀಲ್ ಕೇಸರಿ ಪೇಟಾ ಧರಿಸಿ ಕಲಾಪಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದರು. ರಾಜ್ಯಪಾಲರ ಭಾಷಣ ಆರಂಭದಲ್ಲೆ ವಿಪಕ್ಷ ಸಾಲಿನಲ್ಲಿ ಬಿಜೆಪಿ-ಜೆಡಿಎಸ್ ಸದಸ್ಯರ ಸಂಖ್ಯೆ ವಿರಳವಾಗಿದ್ದುದು ಕಂಡುಬಂತು.

ಗುಸು ಗುಸು..ಜೆಡಿಎಸ್‌ನಿಂದ ಅಮಾನತ್ತುಗೊಂಡಿರುವ ಚಾಮರಾಜಪೇಟೆ ಕ್ಷೇತ್ರದ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ರಾಜ್ಯಪಾಲರ ಭಾಷಣದ ವೇಳೆ ವಿಪಕ್ಷ ಸಾಲಿನಲ್ಲಿರುವ ತಮ್ಮ ಸ್ಥಾನವನ್ನು ಬಿಟ್ಟು ಆಡಳಿತ ಪಕ್ಷದ ಸಾಲಿನಲ್ಲಿ ಆಸೀನರಾಗಿರುವ ಮೂಲಕ ಅಚ್ಚರಿ ಮೂಡಿಸಿದರು.

ಜೆಡಿಎಸ್‌ನ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಎದುರಿನಲ್ಲೆ ಕೂತು ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದು ಕಂಡುಬಂತು. ಅಲ್ಲದೆ, ಆಹಾರ ಸಚಿವ ಯು.ಟಿ.ಖಾದರ್ ಸೇರಿದಂತೆ ಹಲವು ಮಂದಿ ಸಚಿವರೊಂದಿಗೆ ಝಮೀರ್ ಅಹ್ಮದ್ ಸಮಾಲೋಚನೆ ನಡೆಸಿದರು.

 ಅತ್ತ ಮಾಜಿ ಸಚಿವ ಎನ್.ಚಲುವರಾಯ ಸ್ವಾಮಿ, ಮೇಲ್ಮನೆ ಸದಸ್ಯ ವಿ.ಸೋಮಣ್ಣ ಅವರೊಂದಿಗೆ ರಾಜ್ಯಪಾಲರ ಭಾಷಣದ ವೇಳೆ ಉಭಯ ಕುಶಲೋಪರಿಯಲ್ಲಿ ತೊಡಗಿದ್ದು, ಎಲ್ಲರಲ್ಲಿಯೂ ಕುತೂಹಲ ಮೂಡಿಸಿತು. ‘ಇವರು ಆ ಪಕ್ಷಕ್ಕೆ, ಅವರು ಮತ್ತೊಂದು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ’ ಎಂಬ ಗುಸು ಗುಸು ಮೊಗಸಾಲೆಯಲ್ಲಿ ಕೇಳಿಬಂತು.

‘ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಮೊದಲಿಗೆ ಕನ್ನಡದಲ್ಲಿ ಭಾಷಣ ಆರಂಭಿಸುವುದು ವಾಡಿಕೆ. ಆದರೆ, ರಾಜ್ಯಪಾಲ ವಜುಭಾಯಿ ವಾಲಾ ಅವರು ಹಿಂದಿಯಲ್ಲಿ ಭಾಷಣ ಆರಂಭಿಸಿದ್ದು, ವಿಪಕ್ಷ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರಿಂದ ಟೀಕೆ ವ್ಯಕ್ತವಾಗಿದೆ’

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News