ಅಕ್ರಮ ಮರಳು ಗಣಿಗಾರಿಕೆ; ಶಾಮೀಲಾದ ಅಧಿಕಾರಿಗಳ ವಜಾ: ಪರಮೇಶ್ವರ್ ಎಚ್ಚರಿಕೆ
ಬೆಂಗಳೂರು, ಫೆ. 7: ಅಕ್ರಮ ಗಣಿಗಾರಿಕೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಅಕ್ರಮಕ್ಕೆ ಕುಮ್ಮಕ್ಕು ನೀಡುವ ಅಧಿಕಾರಿಗಳನ್ನು ಸೇವೆಯಿಂದಲೇ ವಜಾಗೊಳಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ವಿಧಾನಸಭೆ ಶೂನ್ಯವೇಳೆಯಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ ಲೋಕೋಪಯೋಗಿ, ಕಂದಾಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಶಾಮೀಲಾಗಿದ್ದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.
ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ರಕ್ಷಿಸುವ ಪ್ರಶ್ನೆಯೆ ಇಲ್ಲ. ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತುಗೊಳಿಸುವ ಬದಲಿಗೆ ಸೇವೆಯಿಂದಲೇ ವಜಾ ಮಾಡಲು ಸರಕಾರ ನಿರ್ಧರಿಸಿದೆ ಎಂದು ಪರಮೇಶ್ವರ್ ಹೇಳಿದರು.
ಅಕ್ರಮ ಮರಳು ಗಣಿಗಾರಿಕೆ ತಡೆಗೆ ಸರಕಾರ ಗಂಭೀರವಾದ ಕ್ರಮ ಕೈಗೊಂಡಿದೆ. ಪೊಲೀಸ್, ಕಂದಾಯ ಹಾಗೂ ಲೋಕೋಪಯೋಗಿ ಸೇರಿದಂತೆ ಮೂರು ಇಲಾಖೆ ಅಧಿಕಾರಿಗಳು ಸೇರಿ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಕ್ರಮಗಳನ್ನು ಕೈಗೊಂಡಿದ್ದು, ಸರಕಾರ ಯಾವುದೇ ಸಂದರ್ಭದಲ್ಲಿಯೂ ಕೈಕಟ್ಟಿ ಕೂತಿಲ್ಲ ಎಂದರು.
30 ಸಾವಿರ ಮಂದಿ ಬಂಧನ: ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಸಂಬಂಧಪಟ್ಟಂತೆ ಮೂರು ವರ್ಷಗಳಲ್ಲಿ 16,203 ಪ್ರಕರಣಗಳನ್ನು ದಾಖಲಿಸಿದ್ದೇವೆ. 30 ಸಾವಿರ ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ, 25,957 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪರಮೇಶ್ವರ್ ಮಾಹಿತಿ ನೀಡಿದರು.
ಅಕ್ರಮ ಮರಳು ದಂಧೆ ನಿಯಂತ್ರಣಕ್ಕೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ನಡೆವೆಯೇ ಆಕಸ್ಮಿಕವೆಂಬಂತೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದಲ್ಲಿ ಟ್ರಾಕ್ಟರ್ ಚಾಲಕನನ್ನು ಬಂಧಿಸಲಾಗಿತ್ತು. ಆತ ಪೊಲೀಸ್ ಠಾಣೆಯಲ್ಲಿ ಸಾವನ್ನಪ್ಪಿದ್ದಾನೆಂಬ ಕಾರಣಕ್ಕೆ ಗಲಾಟೆ ನಡೆದಿದೆ.
ಸಿಐಡಿ ತನಿೆ: ಟ್ರಾಕ್ಟರ್ ಚಾಲಕನ ಸಾವು, ಆ ಬಳಿಕ ಪೊಲೀಸ್ ಠಾಣೆಯ ಮೇಲೆ ದಾಂಧಲೆ-ಬೆಂಕಿ ಹಚ್ಚಿದ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದು, ತನಿಖೆಯಿಂದ ಸತ್ಯಾಂಶ ಬೆಳಕಿಗೆ ಬರಲಿದೆ. ಪಿಎಸ್ಸೈ, ಸಬ್‌ಇನ್ಸ್‌ಪೆಕ್ಟರ್ ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.
ಅಮಾನತ್ತಿಗೆ ಆಗ್ರಹ: ಅಕ್ರಮ ಮರಳು ದಂಧೆಯಲ್ಲಿ ಪಿಎಸ್ಸೈ ಶ್ರೀನಿವಾಸ್ ಶಾಮೀಲಾಗಿದ್ದು, ಮೊದಲು ಆತನನ್ನು ಅಮಾನತ್ತು ಮಾಡಬೇಕು. ಟ್ರಾಕ್ಟರ್ ಚಾಲಕ ಶಿವಪ್ಪನನ್ನು ಠಾಣೆಗೆ ಕರೆತಂದು ಮನಸೋ ಇಚ್ಛೆ ಥಳಿಸಿದ ಹಿನ್ನೆಲೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕೆಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗ್ರಹಿಸಿದರು. ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸಿದ್ದು ನ್ಯಾಮಗೌಡ, ಮೃತ ಶಿವಪ್ಪ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದರು.