×
Ad

ನ್ಯಾಯಾಲಯ ಕಟ್ಟಡ ಉದ್ಘಾಟನೆಗೆ ಜನಪ್ರತಿನಿಧಿಗಳು ಬೇಡ : ಹೈಕೋರ್ಟ್ ಸುತ್ತೋಲೆಗೆ ತೀವ್ರ ಆಕ್ಷೇಪ

Update: 2017-02-08 18:47 IST

ಬೆಂಗಳೂರು, ಫೆ. 8: ನ್ಯಾಯಾಲಯ ಕಟ್ಟಡ ಉದ್ಘಾಟನೆ ಸೇರಿ ನ್ಯಾಯಾಧೀಶರು ಭಾಗವಹಿಸುವ ಸಮಾರಂಭಗಳಲ್ಲಿ ಜನಪ್ರತಿನಿಧಿಗಳು ವೇದಿಕೆ ಅಲಂಕರಿಸುವಂತಿಲ್ಲ ಎಂಬ ಹೈಕೋರ್ಟ್ ಸುತ್ತೋಲೆ ವಿಧಾನಸಭೆಯಲ್ಲಿ ಪಕ್ಷಭೇದ ಮರೆತು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಬುಧವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವದ ಮೇಲಿನ ಚರ್ಚೆಯಲ್ಲಿ ವಿಷಯ ಪ್ರಸ್ತಾಪಿಸಿದ ಆಡಳಿತ ಪಕ್ಷದ ಸದಸ್ಯ ಕೆ.ಎನ್.ರಾಜಣ್ಣ, ಜನಪ್ರತಿನಿಧಿಗಳು ವೇದಿಕೆ ಹಂಚಿಕೊಳ್ಳಬಾರದೆಂದರೆ, ನ್ಯಾಯಾಧೀಶರೇನು ದೇವಮಾನವರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಲಯ ಕಟ್ಟಡಗಳು, ನ್ಯಾಯಾಧೀಶರ ವಸತಿ ಗೃಹ ನಿರ್ಮಾಣಕ್ಕೆ ಜನತೆಯ ತೆರಿಗೆ ಹಣ ವೆಚ್ಚ ಮಾಡುತ್ತಿದ್ದು, ತೆರಿಗೆದಾರರ ಹಣದ ವೆಚ್ಚಕ್ಕೆ ಅನುಮೋದನೆ ನೀಡುವುದು ಸರಕಾರ. ಆದರೆ, ಜನಪ್ರತಿನಿಧಿಗಳು ವೇದಿಕೆ ಏರಬೇಡಿ ಎಂದು ಸುತ್ತೋಲೆ ಹೊರಡಿಸಿ ಅವಮಾನ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.

ಆಹ್ವಾನಿಸಿದರೆ ಹೋಗಿ ಕಾರ್ಯಕ್ರಮದಲ್ಲಿ ಮುಂದಿನ ಸಾಲಿನಲ್ಲಿ ಕೂರಬೇಕು. ಹೀಗಾದರೆ ನ್ಯಾಯಾಧೀಶರು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳೆ ಎಂದು ಪ್ರಶ್ನಿಸಿದ ಅವರು, ನ್ಯಾಯಾಧೀಶರನ್ನು ಪ್ರಶ್ನಿದರೆ ‘ನ್ಯಾಯಾಂಗ ನಿಂದನೆ’ ಅಸ್ತ್ರ ಪ್ರಯೋಗಿಸುವ ಮೂಲಕ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತಿದ್ದು, ಅವರನ್ನು ಭಯೋತ್ಪಾದಕರು ಎಂದರೆ ತಪ್ಪಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾನೂನು ರೂಪಿಸುವುದು ಶಾಸಕಾಂಗ. ಶಾಸಕಾಂಗ ನಿಷ್ಕೃಿಯತೆ ಹಿನ್ನೆಲೆಯಲ್ಲಿ ಇದೀಗ ಕೋರ್ಟ್‌ಗಳೇ ಕಾನೂನು ರೂಪಿಸುವ ಕೆಲಸಕ್ಕೆ ಮುಂದಾಗಿವೆ ಎಂದ ಅವರು, ಕೋರ್ಟ್ ಕಟ್ಟಡಗಳನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸುತ್ತದೆ. ಆದರೆ, ಅದನ್ನು ಜನಪ್ರತಿನಿಧಿಗಳೇ ಉದ್ಘಾಟಿಸಿ ಆ ಬಳಿಕ ನ್ಯಾಯಾಂಗದ ವಶಕ್ಕೆ ನೀಡಬೇಕು ಎಂದು ಆಗ್ರಹಿಸಿದರು.

ನ್ಯಾಯಾಧೀಶರ ಪೈಕಿ ಶೇ.50ರಷ್ಟು ಭ್ರಷ್ಟರು ಎಂದು ಮುಖ್ಯ ನ್ಯಾಯಮೂರ್ತಿಗಳೇ ಹೇಳಿದ್ದಾರೆ ಎಂದು ಉಲ್ಲೇಖಿಸಿದ ರಾಜಣ್ಣ, ಇಂತಹ ವ್ಯಕ್ತಿಗಳು ಜನಪ್ರತಿನಿಧಿಗಳ ವಿರುದ್ಧ ಸುತ್ತೋಲೆ ಹೊರಡಿಸಿರುವುದು ಸರಿಯಲ್ಲ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್ ಸದಸ್ಯ ಶಿವಲಿಂಗೇಗೌಡ, ನ್ಯಾಯಾಧೀಶರಿಗೆ ಜಿ-ಕೆಟಗರಿ ಸೈಟ್ ನೀಡಲಾಗುತ್ತಿದೆ. ಆದರೆ, ನಮಗೆ ಒಂದು ಅಡಿ ಜಾಗವೂ ಇಲ್ಲ. ಅವರ ಬದಲಿಗೆ ಮೊದಲು ತಮಗೆ ಜಿ-ಕೆಟಗರಿ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸಿ.ಟಿ.ರವಿ, ಅರವಿಂದ ಲಿಂಬಾವಳಿ ಧ್ವನಿಗೂಡಿಸಿದರು.


‘ನ್ಯಾಯಾಧೀಶರುಗಳೇನು ಇಂದ್ರಲೋಕದಿಂದ ಬಂದಿಲ್ಲ. ಅವರು ನಮ್ಮಂತೆಯೇ ಮನುಷ್ಯರು. ಅವರ ಸ್ವಂತ ಮತ್ತು ಬೇನಾಮಿ ಆಸ್ತಿಗಳ ಬಗ್ಗೆ ತನಿಖೆ ನಡೆಸಬೇಕು. ‘ನ್ಯಾಯಾಂಗ ನಿಂದನೆ’ ಅಸ್ತ್ರವನ್ನು ಮುಂದಿಟ್ಟಕೊಂಡು ಜನರಲ್ಲಿ ಭಯ ಸೃಷ್ಟಿ ಸಲ್ಲ. ಆ ಬೃಹಸ್ಪತಿಗಳನ್ನು ನಿಯಂತ್ರಿಸುವುದು ಬೇಡವೇ..’
-ಕೆ.ಎನ್.ರಾಜಣ್ಣ ಆಡಳಿತ ಪಕ್ಷದ ಹಿರಿಯ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News