ಎಂಆರ್‌ಪಿಎಲ್ ಭೂಸ್ವಾಧೀನಕ್ಕೆ ವಿರೋಧ: ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ರೈತರ ನಿಯೋಗ

Update: 2017-02-09 16:36 GMT

ಬೆಂಗಳೂರು, ಫೆ.9: ಎಂಆರ್‌ಪಿ ಎಲ್ ಮತ್ತು ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ 1,111 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸುವ ಯೋಜನೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಒತ್ತಾಯಿಸಿತು. ಸಾಮಾಜಿಕ ಕಾರ್ಯಕರ್ತೆ ವಿದ್ಯಾದಿನಕರ್ ಈ ನಿಯೋಗದ ನೇತೃತ್ವ ವಹಿಸಿದ್ದರು.

ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾದ ಈ ನಿಯೋಗ ಈ ಹಿಂದಿನ ಯಡಿಯೂರಪ್ಪ ಸರಕಾರವು ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ 2035 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ನೋಟಿಸ್ ಜಾರಿ ಮಾಡಿತ್ತು. ರೈತರ ಪ್ರತಿಭಟನೆಗೆ ಮಣಿದ ಅಂದಿನ ಸರಕಾರ ಅಷ್ಟೂ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿ ರೈತರಿಗೆ ಮರಳಿಸಿತ್ತು. ಇದು ರೈತ ಚಳುವಳಿಗೆ ಸಂದ ಅಭೂತಪೂರ್ವ ಗೆಲುವು ಎಂದು ಅಂದುಕೊಳ್ಳುತ್ತಿರುವಾಗಲೇ ನಿಮ್ಮ ಸರಕಾರ ಮತ್ತದೇ ಭೂಮಿಯನ್ನು ಎಂಆರ್‌ಪಿಎಲ್ಗಾಗಿ ನೋಟಿಫಿಕೇಷನ್ ಮಾಡಿದೆ. ಇದು ಕಾನೂನು ಬಾಹಿರ ಮತ್ತು ನಿಮ್ಮ ಜನಪರ ಹಾಗೂ ರೈತಪರ ಸಿದ್ಧಾಂತಕ್ಕೆ ವಿರುದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ವಿವರಿಸಿದರು.

ಈ ಸಂಧರ್ಭದಲ್ಲಿ ಮುಖ್ಯಮಂತ್ರಿಯವರು ಹೀಗೆ ಕೈಗಾರಿಕೆಗಳನ್ನು ವಿರೋಧಿಸಿದ್ರೆ, ಉದ್ಯೋಗಕ್ಕೇನು ಮಾಡುವುದು? ಎಂದು ನಿಯೋಗವನ್ನು ಪ್ರಶ್ನಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ವಿದ್ಯಾದಿನಕರ್ ಈಗಾಗಲೇ ಎಂಆರ್‌ಪಿ ಎಲ್ ಬಳಿ ಹೆಚ್ಚುವರಿ ಜಮೀನು ಇದೆ. ಅಲ್ಲದೆ ಜೆಸ್ಕೊಗಾಗಿ ಕೆಐಎಡಿಬಿ ಸ್ವಾಧೀನಪಡಿಸಿಕೊಂಡ ಸುಮಾರು 800 ಎಕರೆಯಷ್ಟು ರೈತರ ಜಮೀನನ್ನು ಬಳಸದೆ ಪಾಳು ಬಿಡಲಾಗಿದೆ. ಅಲ್ಲದೆ ಎಂಎಸ್‌ಇಜೆಡ್‌ಗೆ ರೈತರಿಂದ ಕಿತ್ತು ನೀಡಲಾಗಿರುವ ಜಮೀನಿನಲ್ಲೂ ಹೆಚ್ಚಿನ ಭಾಗ ಬಳಕೆಯಾಗದೆ ಖಾಲಿ ಬಿದ್ದಿದೆ. ಈ ಎಲ್ಲಾ ಜಮೀನುಗಳನ್ನು ಬಳಸುವಂತೆ ಹಾಗು ಎಂ ಆರ್‌ಪಿಎಲ್ ಆವರಣದೊಳಗೆ ಪಾಳು ಬಿದ್ದಿರುವ ಜಮೀನನ್ನು ಸದುಪಯೋಗಪಡಿಸಿಕೊಳ್ಳುವಂತೆ ಸರಕಾರ ತಾಕೀತು ಮಾಡಲಿ. ಸುಖಾಸುಮ್ಮನೆ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡುವುದು ಸರಿಯಲ್ಲ.

ಇದೊಂದು ರೀತಿಯ ಭೂ ಮಾಫಿಯಾ ವ್ಯವಹಾರದಂತಾಗಿದೆ ಎಂದರು.ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಎಂಆರ್‌ಪಿಎಲ್ ಅಧಿಕಾರಿಗಳು ಗುಪ್ತ ಸಭೆ ನಡೆಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಭೂಸ್ವಾಧೀನದಂತಹ ಕ್ರಮಕ್ಕೆ ಮುಂದಾಗುವ ಸಂದರ್ಭದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಾಗುತ್ತದೆ. ರೈತರು ಸಭೆಯಲ್ಲಿದ್ದರು ಎಂಬ ಕಾರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂಆರ್‌ಪಿಎಲ್ ಜೊತೆಗಿನ ಸಭೆಯನ್ನೇ ಮುಂದೂಡಿದ್ದರು. ಅಧಿಕಾರಿಗಳು ಈ ರೀತಿ ವರ್ತಿಸದಂತೆ ಸೂಚನೆ ನೀಡಬೇಕು ಎಂದು ವಿದ್ಯಾದಿನಕರ್ ಮನವಿ ಮಾಡಿದರು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಿಎಂ, ಸರಕಾರಿ ಅಧಿಕಾರಿಗಳು ಪಾರದರ್ಶಕವಾಗಿ ಕೆಲಸ ನಿರ್ವಹಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದರು.

ಕೃಷಿ ಭೂಮಿ ಸಂರಕ್ಷಣಾ ಸಮಿತಿಯ ನಿಯೋಗದಲ್ಲಿ ರೈತರಾದ ವಿಲಿಯಂ ಡಿಸೋಜ, ಲಾರೆನ್ಸ್ ಡಿಕುನ್ಹಾ, ಭೋಜ ಶೆಟ್ಟಿಗಾರ್, ಧೀರಜ್, ಪೆಜತ್ತಾಯ ಮುಂತಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News