ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡದ ಮಾಲಕರಿಗೆ ದಂಡ

Update: 2017-02-10 14:28 GMT

ಬೆಂಗಳೂರು, ಫೆ. 10: ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡದೆ ಅನ್ಯಾಯ ಮಾಡುವ ಮಾಲಕರಿಗೆ 10 ಸಾವಿರ ರೂ.ವರೆಗೂ ದಂಡ ಮತ್ತು ಆರು ತಿಂಗಳ ಕಾರಾಗೃಹ ಶಿಕ್ಷೆಗೆ ಅವಕಾಶ ಕಲ್ಪಿಸುವ ‘ಕನಿಷ್ಠ ಮಜೂರಿಗಳ (ಕರ್ನಾಟಕ ತಿದ್ದುಪಡಿ) ವಿಧೇಯಕ- 2017’ನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

 ಶುಕ್ರವಾರ ವಿಧಾನಸಭೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಧೇಯಕ ಮಂಡಿಸಿ, 1948ರ ಮೂಲ ಕಾಯ್ದೆ, ಸೆಕ್ಷನ್ 20, 22, 22‘ಎ’ಗೆ ತಿದ್ದುಪಡಿ ತರಲಾಗಿದೆ. ಮೂಲ ಕಾಯ್ದೆ ಸೆಕ್ಷನ್ 20ರಲ್ಲಿ ಯಾವುದೇ ವ್ಯಕ್ತಿ ಕನಿಷ್ಠ ಕೂಲಿ ಕೊಡದೆ ಸತಾಯಿಸಿದರೆ ಅಥವಾ ಕಿರುಕುಳ ಕೊಟ್ಟರೆ ಅಂತಹ ವ್ಯಕ್ತಿಯ ವಿರುದ್ಧ ಕಾರ್ಮಿಕ ಇಲಾಖೆ ಆಯುಕ್ತರು ಕೇಂದ್ರ ಸರಕಾರದ ಅಧಿಕಾರಿ ಅಥವಾ ಸಿವಿಲ್ ನ್ಯಾಯಾಧೀಶರಿಗೆ ದೂರು ನೀಡಬೇಕೆಂದು ಉಲ್ಲೇಖಿಸಲಾಗಿತ್ತು.

ಕಡಿಮೆ ವೇತನಕ್ಕೆ ಕೆಲಸ ಮಾಡುವ ವ್ಯಕ್ತಿಗಳು ಆಯುಕ್ತರ ಹಂತದವರೆಗೂ ದೂರು ತೆಗೆದುಕೊಂಡು ಹೋಗುವ ಕಷ್ಟಗಳನ್ನು ಅರಿತಿರುವ ರಾಜ್ಯ ಸರಕಾರ ಮೂಲ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಆಯುಕ್ತರ ಬದಲಾಗಿ ಸಹಾಯಕ ಕಾರ್ಮಿಕ ಆಯುಕ್ತರ ದರ್ಜೆಯ ಅಧಿಕಾರಿ ಬಳಿ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.

ಈ ಮೂಲ ಕಾಯ್ದೆಯಲ್ಲಿ ದಂಡದ ಪ್ರಮಾಣವನ್ನು 500 ರೂ. ಮತ್ತು 6 ತಿಂಗಳ ಕಾರಾಗೃಹ ಶಿಕ್ಷೆಯನ್ನು ನಿಗದಿ ಮಾಡಲಾಗಿತ್ತು. ಅದಕ್ಕೆ ತಿದ್ದುಪಡಿ ತಂದು ದಂಡದ ಪ್ರಮಾಣವನ್ನು 5 ರಿಂದ 10 ಸಾವಿರ ರೂ.ವರೆಗೂ ಹೆಚ್ಚಿಸಲಾಗಿದೆ ಎಂದು ಸದನಕ್ಕೆ ಸಂತೋಷ್ ಲಾಡ್ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News