ಬಡ ಹೆಣ್ಮಕ್ಕಳ ಮನಗೆದ್ದ BWF ಮಿತ್ರರು

Update: 2017-02-10 16:06 GMT

ವಿದೇಶಕ್ಕೆ ಕೆಲಸ ಅರಸುತ್ತಾ ತೆರಳುವ ಅನಿವಾಸಿ ಮಿತ್ರರು ತಾನಾಯಿತು, ತನ್ನ ಪಾಡಾಯಿತು ಎಂದು ಇರುವುದು ಸಾಮಾನ್ಯ. ಗಲ್ಫ್ ಜೀವನ ಎಂದರೆ ತನ್ನ ಕೋಣೆ ಮತ್ತು ಕೆಲಸದ ಸ್ಥಳಕ್ಕೆ ಸೀಮಿತವಾಗಿರುತ್ತದೆ. ಇವಿಷ್ಟಲ್ಲ.., ಇದಕ್ಕೂ ಆಚೆಗಿನ ಅರ್ಥಪೂರ್ಣ ಜೀವನ ನಡೆಸಬೇಕೆಂದು ಪಣತೊಟ್ಟು ಇಂದು ಕರಾವಳಿಯ ಬಡವರ ಮನೆ ಮನೆ ಮಾತಾದ ಒಂದು ಸಂಸ್ಥೆ ಎದ್ದು ನಿಂತಿರುವುದು ನಿಜಕ್ಕೂ ಸೋಜಿಗ.

ಅಬುದಾಬಿಯಲ್ಲಿ ನೆಲೆಸಿರುವ ನಮ್ಮೂರ ಸುಮಾರು 12 ಮುಸ್ಲಿಂ ಕುಟುಂಬ ಒಂದೆಡೆ ಸೇರುತ್ತದೆ. ಅಬುದಾಬಿಯಲ್ಲೊಂದು "ಫ್ಯಾಮಿಲಿ ಮೀಟ್" ಏರ್ಪಡಿಸುತ್ತದೆ. ಆವೊಂದು ಫ್ಯಾಮಿಲಿ ಮೀಟ್ ನೂರಾರು ಬಡ/ಅಶಕ್ತ ಕುಟುಂಬಕ್ಕೆ ಆಸರೆಯಾಗುತ್ತದೆ ಎಂದು ಅಂದು ಯಾರೂ ಊಹಿಸಿರಲಿಕ್ಕಿಲ್ಲ. ಆದರೆ ಇಂದು ಅಬುದಾಬಿಯ ಆ ತಂಡ ಕರಾವಳಿ ಜಿಲ್ಲೆಯಲ್ಲಿ ಕ್ರಾಂತಿಯನ್ನು ಮಾಡಿದೆ. ಯಾರೂ ಮಾಡದ್ದನ್ನು ಮಾಡಿ ತೋರಿಸಿದೆ.

2005 ರಲ್ಲಿ ಮಹಮ್ಮದಲಿ ಉಚ್ಚಿಲ ನೇತೃತ್ವದಲ್ಲಿ ಅಬುದಾಬಿಯಲ್ಲಿ ಫ್ಯಾಮಿಲಿ ಗೆಟ್-ಟುಗೆದರ್ ಆಯೋಜಿಸಲಾಗುತ್ತದೆ. ತನ್ನ ಸರ್ಕಲ್ ನಲ್ಲಿರುವ ಶಾಹುಲ್ ಹಮೀದ್ ಪರ್ಲಿಯಾ, ಅಬ್ದುಲ್ ಹಮೀದ್ ಉಚ್ಚಿಲ್, ಮೊಯ್ದಿನಾಕ ಮಂಗಳೂರು, ಅಬ್ದುಲ್ಲ ಮದುಮೂಲೆ, ಹಂಝ ಅಬ್ದುಲ್ ಖಾದರ್, ರಫೀಕ್ ಕೃಷ್ಣಾಪುರ, ಮಹಮ್ಮದ್ ಸಿದ್ದೀಕ್ ಕಾಪು, ಹನೀಫ್ ಉಳ್ಳಾಲ್, ಅಬ್ದುಲ್ ಮಜೀದ್ ಕುತ್ತಾರ್, ಇಮ್ರಾನ್ ಅಹ್ಮದ್ ಕುದ್ರೋಳಿ ಮೊದಲಾದ ಸುಮಾರು 12 ಕುಟುಂಬಿಕರು ಒಟ್ಟು ಸೇರುತ್ತಾರೆ. ಅದೇ ತಂಡ ಕುಟುಂಬ ಸಮ್ಮಿಲನಕ್ಕೆ ಒಂದು ಸಂಘಟನೆಯ ರೂಪ ನೀಡುತ್ತದೆ. "ಬ್ಯಾರೀಸ್ ವೆಲ್ಫೇರ್ ಫಾರಂ" (ಬಿಡಬ್ಲ್ಯುಎಫ್) ಅಬುದಾಬಿ ಹೆಸರಲ್ಲಿ ಸಂಘಟನೆ ಕಾರ್ಯಾರಂಭವಾಗುತ್ತದೆ. ಮಹಮ್ಮದಲಿ ಉಚ್ಚಿಲ್ ಅಧ್ಯಕ್ಷರಾಗಿಯೂ, ಅಬ್ದುಲ್ಲ ಮದುಮೂಲೆ ಕಾರ್ಯದರ್ಶಿಯಾಗಿಯೂ ನೇಮಕವಾಗುತ್ತಾರೆ. ಸಂಸ್ಥೆಗೆ ದಶಮಾನೋತ್ಸವ ಕಳೆದರೂ ಅವರೇ ಈ ತನಕವೂ ಸರ್ವಾನುಮತದಿಂದ ಅಧ್ಯಕ್ಷ, ಕಾರ್ಯದರ್ಶಿಯಾಗಿ ಮುಂದುವರೆದಿದ್ದಾರೆ. ಪ್ರಸ್ತುತ ಬಿಡಬ್ಲ್ಯುಎಫ್ 25 ಕಾರ್ಯಕಾರೀ ಸಮಿತಿ ಸದಸ್ಯರನ್ನು ಹಾಗೂ ಅಬುದಾಬಿಯಾದ್ಯಂತ ಸುಮಾರು 600 ಸಾಮಾನ್ಯ ಸದಸ್ಯರನ್ನು ಹೊಂದಿದೆ. ಊರಿನ ಬಡ ಹೆಣ್ಮಕ್ಕಳ ಕಣ್ಣೀರಿಗೆ ಪನ್ನೀರಾಗುವುದೇ ಈ ಸಂಘಟನೆಯ ಮೂಲ ಉದ್ದೇಶವಾಗುತ್ತದೆ.

ಮುಸ್ಲಿಂ ಸಮುದಾಯದಲ್ಲಿ ವರದಕ್ಷಿಣೆಯ ಪೆಡಂಬೂತಕ್ಕೆ ಬಲಿಯಾಗಿ ಬಡಹೆಣ್ಮಕ್ಕಳು ಮೂಲೆಗುಂಪಾಗುವುದನ್ನು ಮನಗಂಡ ಬಿಡಬ್ಲ್ಯುಎಫ್ ಸಂಘಟನೆ ಅಂತಹ ಹೆಣ್ಮಕ್ಕಳ ಆಪ್ತ ಸಂಸ್ಥೆಯಾಗಿ ಹೊರಹೊಮ್ಮುತ್ತದೆ. ಸಾಮೂಹಿಕ ವಿವಾಹಕ್ಕೆ ಅಡಿಪಾಯ ಹಾಕುತ್ತದೆ. 2007 ರಲ್ಲಿ ಮಂಗಳೂರಿನಲ್ಲಿ ಸಭೆ ನಡೆಸಿದ ಬಿಡಬ್ಲ್ಯುಎಫ್ ತಂಡ ಮಂಗಳೂರಿನ ಪ್ರಮುಖರಾದ ಯು.ಟಿ.ಖಾದರ್, ಎಂ.ಬಿ.ಅಬ್ದುರ್ರಹ್ಮಾನ್, ಉಮರ್ ಯು.ಎಚ್, ಯು.ಕೆ.ಇಬ್ರಾಹಿಂ ಹಾಜಿ, ಸ್ಟೇಟ್ ಬ್ಯಾಂಕ್ ಖಾದ್ರಿಯಾಕನನ್ನು ಸೇರಿಸಿಕೊಂಡು ಪ್ರಥಮ ಸಭೆ ನಡೆಸುತ್ತದೆ. ಬಿಡಬ್ಲ್ಯುಎಫ್ ಮಾಸ್ ಮ್ಯಾರೇಜ್ ಕಮಿಟಿ ಅಸ್ತಿತ್ವಕ್ಕೆ ಬರುತ್ತದೆ. ಬಡ ಹೆಣ್ಮಕ್ಕಳ ಸಾಮೂಹಿಕ ವಿವಾಹ ಸಮಾರಂಭ ಪ್ರಾರಂಭವಾಗುತ್ತದೆ. ಬಂದ ಬಡಕುಟುಂಬದ ಅರ್ಜಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಕುಟುಂಬಗಳನ್ನು ಆಯ್ಕೆ ಮಾಡಿ ಮದುವೆ ಮಾಡಿಸಲಾಗುತ್ತದೆ. ಮದುಮಗಳಿಗೆ ಚಿನ್ನದೊಡವೆ, ಮದುವೆ ವಸ್ತ್ರ, ಖರ್ಚಿಗೆ ಮೊತ್ತ, ಮದುಮಗನಿಗೆ ಬಟ್ಟೆಬರೆ ನೀಡಲಾಗುತ್ತದೆ. ಹೀಗೇ ಮುಂದುವರಿದ ಸಾಮೂಹಿಕ ವಿವಾಹ ಜೋಡಿಗಳ ಸಂಖ್ಯೆ 83 ಕ್ಕೆ ತಲುಪಿದೆ. ನಾಳೆ (11/02) ಮಿಲಾಗ್ರಿಸ್ ಹಾಲ್ ನಲ್ಲಿ ಮತ್ತೆ 17 ಜೋಡಿಗೆ ಮದುವೆ ನಡೆಯಲಿದೆ. ಹೀಗೇ ಒಟ್ಟು ನೂರು ಜೋಡಿಗೆ ವಿವಾಹ ನಡೆಸುವ ಮೂಲಕ ಬಿಡಬ್ಲ್ಯುಎಫ್ ಎಂಬ ಅಬುದಾಬಿಯ ಸಂಘಟನೆ ಕ್ರಾಂತಿ ಮಾಡಿದೆ. ಕರಾವಳಿ ಜಿಲ್ಲೆಯಲ್ಲಿ ಪ್ರಥಮವಾಗಿ ಪ್ರಾರಂಭಗೊಂಡ ಬಿಡಬ್ಲ್ಯುಎಫ್ ಸಾಮೂಹಿಕ ವಿವಾಹವನ್ನು ಮಾದರಿಯಾಗಿ ತೆಗೆದುಕೊಂಡು ಇಂದು ಹಲವು ಸಾಮಾಜಿಕ ಸಂಘಟನೆಗಳು ಬಡಹೆಣ್ಮಕ್ಕಳ ಮದುವೆ ನಡೆಸುತ್ತಿದೆ. ಒಂದು ರೀತಿಯಲ್ಲಿ ಜಾಗೃತಿ ಮೂಡಿಸಿದೆ. ವರದಕ್ಷಿಣೆಯ ಸಮಸ್ಯೆ ಹಂತಹಂತವಾಗಿ ಕಡಿಮೆಯಾಗುತ್ತಾ ಬರುತ್ತಿದೆ. ಬಿಡಬ್ಲ್ಯುಎಫ್ ಸಾಮೂಹಿಕ ವಿವಾಹಕ್ಕೆ ಆರ್ಥಿಕ ಸಹಾಯ ಮಾಡುತ್ತಿದ್ದರೆ ಊರಿನಲ್ಲಿದ್ದುಕೊಂಡು ಅದರ ಕೆಲಸಕಾರ್ಯಗಳನ್ನು ಅಲ್ ವಫಾ ಚಾರಿಟೇಬಲ್ ಟ್ರಸ್ಟ್ ಸುಸೂತ್ರವಾಗಿ ನಡೆಸುತ್ತಿದೆ. ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಅಲ್ ವಫಾದ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.

ಇವಿಷ್ಟೇ ಅಲ್ಲ. ಮದುವೆಯಾದ ಬಳಿಕ ಆ ಫಲಾನುಭವಿಗಳ ಮನೆಮನೆ ಸಂದರ್ಶಿಸುವ ಕಾರ್ಯವನ್ನೂ ಬಿಡಬ್ಲ್ಯುಎಫ್ ಕೈಗೆತ್ತಿಕೊಂಡಿತು. ಹೀಗೇ ಸರ್ವೆ ನಡೆಸುವಾಗ ಎಡಪದವು ಎಂಬಲ್ಲಿ ಟಾಯ್ಲೆಟ್ ರಹಿತ ಮನೆಯನ್ನು ಕಂಡು ಬೇಸತ್ತ ಬಿಡಬ್ಲ್ಯುಎಫ್ ಅಂದಿನಿಂದ ಟಾಯ್ಲೆಟ್ ಇಲ್ಲದ ಬಡವರ ಮನೆಗಳಲ್ಲಿ ಟಾಯ್ಲೆಟ್ ನಿರ್ಮಾಣ ಪ್ರಾರಂಭಿಸಿ ಸ್ವಚ್ಛ ಭಾರತಕ್ಕೆ ಒತ್ತು ನೀಡಿತ್ತದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಈತನಕ ಸುಮಾರು 150 ಟಾಯ್ಲೆಟ್ ಗಳ ನಿರ್ಮಾಣ ಬಿಡಬ್ಲ್ಯುಎಫ್ ನಿಂದ ಆಗಿದೆ. ಅದಿನ್ನೂ ಮುಂದುವರೆಯುತ್ತಿದೆ. ಊರಲ್ಲಿ ಅಲ್ ವಫಾ ಹಾಗೂ ಎಂ.ಫ್ರೆಂಡ್ಸ್ ಟಾಯ್ಲೆಟ್ ಯೋಜನೆಗೆ ಸಹಕಾರ ನೀಡುತ್ತಿದೆ. ಸಾಮೂಹಿಕ ವಿವಾಹ, ಟಾಯ್ಲೆಟ್ ನಿರ್ಮಾಣವಲ್ಲದೆ ಸಮಾರು 40 ವ್ಹೀಲ್ ಚೆಯರ್ ಗಳನ್ನು ಕೂಡಾ ಬಿಡಬ್ಲ್ಯುಎಫ್ ಅರ್ಹರಿಗೆ ವಿತರಿಸಿದೆ. ಕಳೆದೊಂದು ವರ್ಷದ ಹಿಂದೆ ಸಂಸ್ಥೆಗೆ ದಶಮಾನೋತ್ಸವ ಕಾರ್ಯಕ್ರಮ ಅಬುದಾಬಿಯಲ್ಲಿ ಅದ್ದೂರಿಯಾಗಿ ನಡೆದರೆ ಇದೀಗ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ದಶಮಾನೋತ್ಸವದ ಸಂಭ್ರಮ. ದಶವರ್ಷದಲ್ಲೇ ಸೆಂಚುರಿ ಬಾರಿಸಿದ ಸಂತೋಷ ಬೇರೆ. ಬಿಡಬ್ಲ್ಯುಎಫ್ ನಿಂದ ನೂರು ಹೆಣ್ಮಕ್ಕಳ ಬಾಳು ಹಸನಾಯಿತೆಂದರೆ ಅಲ್ಲಿ ಸಾವಿರಾರು ಬಡಕುಟುಂಬ ಖುಷಿಪಟ್ಟಂತೆ. ಲಕ್ಷಾಂತರ ಜನ ಕೈ ಎತ್ತಿ ಪ್ರಾರ್ಥಿಸಿದಂತೆ. ಸಂಘಟನೆಗೆ ದೇವರು ಹತ್ತಿರವಾದಂತೆ. ಬಿಡಬ್ಲ್ಯುಎಫ್ ಇನ್ನಷ್ಟು ಮತ್ತಷ್ಟು ಸಮುದಾಯ ಸ್ನೇಹಿಯಾಗಲಿ. ಶುಭವಾಗಲಿ.

    (ಮಹಮ್ಮದಲಿ ಉಚ್ಚಿಲ)

Writer - ರಶೀದ್ ವಿಟ್ಲ.

contributor

Editor - ರಶೀದ್ ವಿಟ್ಲ.

contributor

Similar News