ಬ್ರಿಗೇಡ್ ಚಟುವಟಿಕೆಯಲ್ಲಿ ನೇರ ಭಾಗಿ: ಕೆ.ಎಸ್.ಈಶ್ವರಪ್ಪ ಹೊಸ ಬಾಂಬ್

Update: 2017-02-11 14:58 GMT

ಬೆಂಗಳೂರು, ಫೆ. 11: ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್’ ಚಟುವಟಿಕೆಗಳಿಂದ ದೂರ ಉಳಿಯುವೆ ಎಂದು ವರಿಷ್ಟರ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಇದೀಗ ಉಲ್ಟಾ ಹೊಡೆದಿದ್ದು, ರಾಯಣ್ಣ ಬ್ರಿಗೇಡ್ ಚಟುವಟಿಕೆಗಳಲ್ಲಿ ನೇರವಾಗಿಯೇ ಭಾಗಿಯಾಗುತ್ತೇನೆ ಎಂದು ಹೊಸಬಾಂಬ್ ಸಿಡಿಸಿದ್ದಾರೆ.

ಶನಿವಾರ ಇಲ್ಲಿನ ಶಾಸಕರ ಭವನದಲ್ಲಿ ಏರ್ಪಡಿಸಿದ್ದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಭೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಯಣ್ಣ ಬ್ರಿಗೇಡ್ ಚಟುವಟಿಕೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ಬಡವರು, ಹಿಂದುಳಿದ ವರ್ಗಗಳ ಜಾಗೃತಿಗಾಗಿ ಬ್ರಿಗೇಡ್ ಕಾರ್ಯ ನಿರ್ವಹಿಸಲಿದೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ತನ್ನನ್ನು ಕರೆದು ಮಾತನಾಡಿದ್ದರು. ರಾಜಕೀಯ ಚಟುವಟಿಕೆ ಬಿಟ್ಟು ಬ್ರಿಗೇಡ್ ಮುಂದುವರೆಸಲು ಸಲಹೆ ನೀಡಿದ್ದರು. ಇಂದಿನ ಸಭೆಯಲ್ಲಿ ಬ್ರಿಗೇಡ್ ಚಟುವಟಿಕೆಗಳ ಬಗ್ಗೆ ಚರ್ಚೆ ಮಾಡುತ್ತೇನೆ. ಎಲ್ಲ ಜಿಲ್ಲೆಗಳಿಂದ ಪದಾಧಿಕಾರಿಗಳು ಆಗಮಿಸಿದ್ದಾರೆ ಎಂದರು.

ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜಕೀಯ ಪಕ್ಷವಲ್ಲ. ಮೊದಲಿನಿಂದಲೂ ರಾಯಣ್ಣ ಬ್ರಿಗೇಡ್ ಅಹಿಂದ ವರ್ಗದ ಜಾಗೃತಿಗಾಗಿ ಕೆಲಸ ಮಾಡಲಿದೆ ಎಂದ ಅವರು, ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ರಾಜಕೀಯ ಬಿಟ್ಟು ಬ್ರಿಗೇಡ್‌ನಲ್ಲಿ ಮುಂದುವರಿಯುವೆ ಎಂದರು.

ಬಿಜೆಪಿಯ ಹಿಂದುಳಿದ ವರ್ಗಗಳ ಪ್ರಭಾರಿಯಾಗಿ ಪಕ್ಷ ಸಂಘಟನೆಗೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸೂಚಿಸಿದ್ದಾರೆ. ಹಿಂದುಳಿದ ವರ್ಗಗಳ ಮೋರ್ಚಾದಿಂದ ಎಲ್ಲ ಜಿಲ್ಲೆಗಳಲ್ಲಿ ಸಂಗೊಳ್ಳಿ ರಾಯಣ್ಣ ಸಮಾವೇಶ ಮಾಡಲಾಗುತ್ತದೆ. ಈ ಸಂಬಂಧ ಫೆ.13ಕ್ಕೆ ಮತ್ತೆ ಸಭೆ ನಡೆಸಿ, ಯಡಿಯೂರಪ್ಪರ ಜೊತೆ ಸಮಾಲೋಚನೆ ನಡೆಸುವೆ ಎಂದರು.

 ಬಿಜೆಪಿಯಿಂದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನ ಮುಖಂಡರಿಗೆ ನೋಟಿಸ್ ಹಿಂಪಡೆಯುವ ಸಂಬಂಧ ಬ್ರಿಗೇಡ್ ಸಭೆಯಲ್ಲಿ ಯಾವುದೇ ಚರ್ಚೆ ನಡೆಸುವುದಿಲ್ಲ ಎಂದ ಅವರು, ದಲಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ರಾಯಣ್ಣ ಬ್ರಿಗೇಡ್ ಚಟುವಟಿಕೆಗಳು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News