ಸಚಿವ ಸೀತಾರಾಂರ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಅಸ್ಪಶ್ಯತೆ : ಅಂಬೇಡ್ಕರ್ ಫೋಟೊ ಇಟ್ಟುಕೊಂಡಿದ್ದಕ್ಕೆ ಕಾಲೇಜಿನಿಂದ ವಜಾ

Update: 2017-02-11 15:00 GMT

ಬೆಂಗಳೂರು, ಫೆ.11: ಪ್ರಾಂಶುಪಾಲರ ಕಚೇರಿಗೆ ಅಂಬೇಡ್ಕರ್ ಭಾವಚಿತ್ರದೊಂದಿಗೆ ಹೋದ ದಲಿತ ಅಧ್ಯಾಪಕನನ್ನು ಕಾಲೇಜಿನಿಂದಲೇ ವಜಾ ಮಾಡಿರುವ ಘಟನೆ ಯೋಜನೆ ಮತ್ತು ಸಾಂಖಿಕ ಸಚಿವ ಎಂ.ಆರ್.ಸೀತಾರಾಂ ಮಾಲಿಕತ್ವದ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ನಡೆದಿದೆ.

ಜೆಎನ್‌ಯುನಲ್ಲಿ ಪಿಎಚ್‌ಡಿ ಪದವಿಗಳಿಸಿರುವ ಡಾ.ಶ್ರೀನಿವಾಸ್ ಅಸ್ಪಶ್ಯತೆಯ ಕಿರುಕುಳಕ್ಕೆ ಒಳಗಾಗಿ ಕಾಲೇಜಿನಿಂದ ವಜಾಗೊಂಡಿರುವ ದಲಿತ ಅಧ್ಯಾಪಕರಾಗಿದ್ದಾರೆ. ಕಳೆದ 9ವರ್ಷದಿಂದ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ರಾಜಕೀಯ ವಿಷಯವನ್ನು ಪಾಠ ಮಾಡುತ್ತಿದ್ದ ಇವರು, ಕಾಲೇಜಿನ ಪ್ರಾಂಶುಪಾಲರು ಹಾಗೂ ಮ್ಯಾನೇಜ್‌ಮೆಂಟ್‌ನಿಂದ ನಿರಂತರವಾದ ಕಿರುಕುಳಕ್ಕೆ ಒಳಗಾಗಿದ್ದಾರೆ.

ಕಳೆದ 9ವರ್ಷಗಳಿಂದ ಅಧ್ಯಾಪನ ವೃತ್ತಿಯಲ್ಲಿ ತೊಡಗಿದ್ದರೂ ಒಮ್ಮೆಯೂ ಸಂಬಳವನ್ನು ಹೆಚ್ಚಳ ಮಾಡಿರುವುದಿಲ್ಲ. ಆದರೆ, ಅದೇ ಕಾಲೇಜಿಗೆ ಹೊಸದಾಗಿ ಸೇರಿದ ಅಧ್ಯಾಪಕರಿಗೆ ಇವರಿಗಿಂತ ಹೆಚ್ಚನ ಸಂಬಳ ಕೊಟ್ಟು ನೇಮಿಸಿಕೊಳ್ಳಲಾಗಿತ್ತು. ಈ ಬಗ್ಗೆ ಪ್ರಶ್ನಿಸಿದರೆ ಪ್ರಾಂಶುಪಾಲರು ಹಾಗೂ ಮ್ಯಾನೆಜ್‌ಮೆಂಟ್‌ನಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ ಎಂದು ಕಾಲೇಜಿನಿಂದ ಹೊರದೂಡಲ್ಪಟ್ಟ ಶ್ರೀನಿವಾಸ ತಮ್ಮ ವೇದನೆಯನ್ನು ಹಂಚಿಕೊಂಡರು.

  ಸಂಬಳ ಹೆಚ್ಚಾಗದಿದ್ದರೂ ತಮ್ಮ ವೃತ್ತಿಯನ್ನು ದಕ್ಷತೆಯಿಂದ ನಡೆಸಿಕೊಂಡು ಹೋಗುತ್ತಿದ್ದೆ. ಆದರೂ ಪ್ರಾಂಶುಪಾಲರ ಕಿರುಕುಳ ಅಲ್ಲಿಗೇ ನಿಲ್ಲಲಿಲ್ಲ. ನನ್ನ ಮೇಲೆ ಹೊಸ ಅಧ್ಯಾಪಕರಿಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾತನಾಡುವುದು, ನನ್ನ ಜೊತೆ ಮಾತನಾಡದಂತೆ ಎಚ್ಚರಿಕೆ ನೀಡುವುದು, ಇವೆಲ್ಲವೂ ನನಗೆ ಅತೀವ ನೋವು ತರಿಸಿದೆ ಎಂದು ಅವರು ತಮ್ಮ ಪ್ರಕರಣವನ್ನು ವಿವರಿಸಿದರು.

 ದಿನೇ ದಿನೇ ಕಿರುಕುಳ ಹೆಚ್ಚಾಗತೊಡಗಿ ಸಹಿಸಲಾಗಲಿಲ್ಲ. ಹೀಗಾಗಿ ಒಮ್ಮೆ ಅಂಬೇಡ್ಕರ್ ಭಾವಚಿತ್ರದೊಂದಿಗೆ ಪ್ರಾಂಶುಪಾಲರ ಕಚೇರಿಗೆ ಹೋಗಿ ಸಂಬಳ ಹೆಚ್ಚು ಮಾಡುವಂತೆ ಹಾಗೂ ನನಗಾಗುತ್ತಿದ್ದ ಕಿರುಕುಳವನ್ನು ಇಲ್ಲಿಗೇ ನಿಲ್ಲಿಸುವಂತೆ ಪಟ್ಟು ಹಿಡಿದು ಕುಳಿತೆ. ಈ ವೇಳೆ ಪ್ರಾಂಶುಪಾಲರು ಅಂಬೇಡ್ಕರ್ ಭಾವಚಿತ್ರ ನೋಡುತ್ತಿದ್ದಂತೆ ಅಸಹ್ಯ ಪಟ್ಟುಕೊಳ್ಳುವ ರೀತಿಯಲ್ಲಿ ತಮ್ಮ ಮುಖ ಮಾಡಿಕೊಂಡು ನನ್ನನ್ನು ಕಚೇರಿಯಿಂದ ಹೊರಕ್ಕೆ ಕಳುಹಿಸಿದರು.

ಪ್ರಾಂಶುಪಾಲರ ಕಚೇರಿಗೆ ಅಂಬೇಡ್ಕರ್ ಭಾವಚಿತ್ರ ತಂದು ಅಪರಾಧ ಎಸಗಿದ್ದೀರಿ. ಹೀಗಾಗಿ ಕಾಲೇಜಿನಿಂದ ಅಮಾನತು ಮಾಡಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ನನ್ನನ್ನು ಕಾಲೇಜಿನಿಂದ ವಜಾ ಮಾಡಲಾಗಿದೆ. ಈ ದೇಶಕ್ಕೆ ಸಂವಿಧಾನ ಸೇರಿದಂತೆ ಹಲವಾರು ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಿದ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಈ ರೀತಿ ಅಪಮಾನ ಮಾಡಿ, ನನ್ನನ್ನು ಕಾಲೇಜಿನಿಂದ ಹೊರ ಹಾಕಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಇದಕ್ಕಿಂತ ಅಪಮಾನ ಮತ್ತೊಂದು ಇರಲಾರದು ಎಂದು ಅವರು ಅಭಿಪ್ರಾಯಿಸಿದರು.

 ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಕಳೆದ 9ವರ್ಷದಿಂದ ಅಧ್ಯಾಪಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಹಾಗೂ ಇಡೀ ಕಾಲೇಜಿನಲ್ಲಿ ಹೆಚ್ಚು ವಿದ್ಯಾಭ್ಯಾಸ ಮಾಡಿದ ಅಧ್ಯಾಪಕ ನಾನೇ ಆಗಿದ್ದೆ. ಆದರೂ ಸಂಬಳ ಮಾತ್ರ ಹೆಚ್ಚಳ ಮಾಡಿಲ್ಲ. ಈ ಬಗ್ಗೆ ಪ್ರಾಂಶುಪಾಲರನ್ನು ಅಂಬೇಡ್ಕರ್ ಭಾವಚಿತ್ರದೊಂದಿಗೆ ಕೇಳಲು ಹೋದಾಗ ಕಾಲೇಜಿನಿಂದ ಹೊರ ಹಾಕಿದ್ದಾರೆ. ಈ ಬಗ್ಗೆ ಹೈ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುತ್ತೇನೆ.

-ಡಾ.ಶ್ರೀನಿವಾಸ್ ಕಾಲೇಜಿನಿಂದ ವಜಾಗೊಂಡ ಅಧ್ಯಾಪಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News