ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಕಲರವಕ್ಕೆ ಉದ್ಯಾನನಗರಿ ಸಜ್ಜು

Update: 2017-02-12 14:21 GMT

ಬೆಂಗಳೂರು, ಫೆ. 12: ಆಗಸದಲ್ಲಿ ಉಕ್ಕಿನ ಹಕ್ಕಿಗಳ ಮೈನವಿರೇಳಿಸುವ ಸಾಹಸ, ಚಿತ್ರ-ವಿಚಿತ್ರ ಕಲರವಕ್ಕೆ ಉದ್ಯಾನನಗರಿ ಬೆಂಗಳೂರಿನ ಯಲಹಂಕದ ವಾಯುನೆಲೆ ಸಜ್ಜಾಗುತ್ತಿದ್ದು, ಫೆ.14ರಿಂದ 18ರ ವರೆಗೆ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ.

ದೇಶದ ರಕ್ಷಣಾ ಪಡೆಯ ಯುದ್ದ ವಿಮಾನಗಳು ಸೇರಿದಂತೆ ವಿವಿಧ ರಾಷ್ಟ್ರಗಳ ಲೋಹದ ಹಕ್ಕಿಗಳು ಆಗಸದಲ್ಲಿ ತಾಲೀಮು ನಡೆಸುತ್ತಿದ್ದು, ಆ ಮೂಲಕ ಉಕ್ಕಿನ ಹಕ್ಕಿಗಳು ಶಕ್ತಿ ಪ್ರದರ್ಶನಕ್ಕೆ ಸಜ್ಜುಗೊಳ್ಳುತ್ತಿವೆ. ಅಲ್ಲದೆ, ದೇಶದ ರಕ್ಷಣಾ ಸಾಮರ್ಥ್ಯವು ಅನಾವರಣಕ್ಕೆ ವೇದಿಕೆ ಸಿದ್ದವಾಗಿದೆ.

ರಕ್ಷಣಾ ಉಪಕರಣಗಳ ಖರೀದಿ, ಜಗತ್ತಿನ ವಿವಿಧ ದೇಶಗಳ ರಕ್ಷಣಾ ಸಲಕರಣೆಗಳ ತಯಾರಕರು, ಪೂರೈಕೆದಾರರು, ಖರೀದಿದಾರರ ಮಧ್ಯೆ ಸಂವಾದ ಮತ್ತು ಹೊಸ ಒಡಂಬಡಿಕೆಗಳಿಗೆ ಬೆಂಗಳೂರಿನಲ್ಲಿ ನಡೆಯಲಿರುವ 11ನೆ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ಸಾಕ್ಷಿಯಾಗಲಿದೆ.

ಬಾನಂಗಳದಲ್ಲಿ ಭಾರತದ ಸಾಮರ್ಥ್ಯ: ವೈಮಾನಿಕ ಪ್ರದರ್ಶನದಲ್ಲಿ ದೇಶದ 270 ಕಂಪೆನಿಗಳು, ವಿದೇಶಗಳ 279 ಕಂಪೆನಿಗಳು ಸೇರಿದಂತೆ ಒಟ್ಟು 500ಕ್ಕೂ ಹೆಚ್ಚು ಕಂಪೆನಿಗಳು ಪಾಲ್ಗೊಳ್ಳಲಿದ್ದು, ಒಟ್ಟು 27 ಸಾವಿರ ಚದರ ಕಿ.ಮೀ ವ್ಯಾಪ್ತಿಯಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ರಕ್ಷಣಾ ವಿಮಾನಗಳು ಸೇರಿದಂತೆ ಒಟ್ಟು 72 ಲೋಹದ ಹಕ್ಕಿಗಳು ವೈಮಾನಿಕ ಪ್ರದರ್ಶನದಲ್ಲಿ ಭಾಗಿಯಾಗಲಿದ್ದು, ಎರಡು ಲಕ್ಷಕ್ಕೂ ಅಧಿಕ ಮಂದಿ ವ್ಯವಹಾರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಆಗಸದಲ್ಲಿ ಲೋಹದ ಹಕ್ಕಿಗಳ ವೈಯಾರವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಆಗಮಿಸುವ ಸಾಧ್ಯತೆಗಳಿವೆ.

ಪ್ರಧಾನಿಯಿಂದ ಚಾಲನೆ: ಫೆ.14ರಂದು ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಪ್ರದರ್ಶನದಲ್ಲಿ ದೇಶದಲ್ಲಿನ ವಿಮಾನಯಾನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಆಕರ್ಷಣೆ, ಮೇಕ್ ಇನ್ ಇಂಡಿಯಾ ಯೋಜನಯೆಇ ವಿಮಾನಯಾನ ಕ್ಷೇತ್ರದ ಅಭಿವೃದ್ಧಿ, ಉದ್ಯಮಿಗಳೊಂದಿಗೆ ಸಂವಾದ, ಒಡಂಬಡಿಕೆಗಳು ಆಗುವ ಸಾಧ್ಯತೆಗಳಿದ್ದು, ಎಲ್ಲರ ಚಿತ್ತ ವೈಮಾನಿಕ ಪ್ರದರ್ಶನ ದತ್ತ ನೆಟ್ಟಿದೆ.

ಅಮೆರಿಕಾ, ಇಂಗ್ಲೆಂಡ್, ಟರ್ಕಿ, ಥಾಯ್ಲೆಂಡ್, ಸ್ವಿಜರ್ ಲ್ಯಾಂಡ್, ದಕ್ಷಿಣಾಫ್ರಿಕಾ, ಮಲೇಶಿಯಾ, ಜರ್ಮನಿ, ಫ್ರಾನ್ಸ್, ಇಸ್ರೇಲ್, ಜಪಾನ್ ಸೇರಿದಂತೆ 30ಕ್ಕೂ ಹೆಚ್ಚು ದೇಶಗಳ 65ಕ್ಕೂ ಹೆಚ್ಚು ಪ್ರತಿನಿಧಿಗಳು, ವಿವಿಧ ರಾಷ್ಟ್ರಗಳ ರಕ್ಷಣಾ ಸಚಿವರುಗಳ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಚಾರ ಮಾರ್ಪಾಡು: ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತೆರಳುವವರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ, ಆ ಭಾಗದಲ್ಲಿ ಸಂಚಾರ ದಟ್ಟಣೆ ಸಾಧ್ಯತೆ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗ ಅನುಸರಿಸಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News