ನೋಟು ರದ್ದತಿ ಐಡಿಯಾವೇ ಸರಿ ಇಲ್ಲ: ರಾಜೀವ್ ಬಜಾಜ್

Update: 2017-02-17 03:40 GMT

ಹೊಸದಿಲ್ಲಿ, ಫೆ.17: ಕಳೆದ ನವೆಂಬರ್‌ನಲ್ಲಿ ದೇಶದ ವಿತ್ತ ವ್ಯವಸ್ಥೆಯಿಂದ ಅಧಿಕ ವೌಲ್ಯದ ನೋಟುಗಳನ್ನು ಹಿಂದೆಗೆದುಕೊಂಡ ಕ್ರಮವನ್ನು ಬಜಾಜ್ ಆಟೊ ಆಡಳಿತ ನಿರ್ದೇಶಕ ರಾಜೀವ್ ಬಜಾಜ್ ಕಟುವಾಗಿ ಟೀಕಿಸಿದ್ದಾರೆ.

ಮೂಲಭೂತವಾಗಿ ನೋಟು ರದ್ದತಿ ಪರಿಕಲ್ಪನೆಯೇ ದೋಷಪೂರಿತ. ಆದ್ದರಿಂದ ಅದರ ಜಾರಿಯಲ್ಲಿನ ಲೋಪವನ್ನು ಟೀಕಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಂದು ಯೋಚನೆ ಅಥವಾ ಪರಿಹಾರ ಕ್ರಮ ವಾಸ್ತವವಾಗಿ ಸರಿಯಾಗಿದ್ದರೆ, ಅದು ಬೆಣ್ಣೆಯ ಮೇಲೆ ಬಿಸಿ ಚಾಕುವಿನಂತಾಗುತ್ತದೆ. ಆದರೆ ಮೂಲೂತ ಯೋಚನೆಯೇ ಕಾರ್ಯಸಾಧುವಲ್ಲದಿದ್ದರೆ, ಅದರ ಜಾರಿಯ ಬಗ್ಗೆ ಟೀಕಿಸುವುದರಲ್ಲಿ ಅರ್ಥವಿಲ್ಲ ಎಂದು ನ್ಯಾಸ್‌ಕಾವ್ ಲೀಡರ್‌ಶಿಪ್ ಪೋರಂನ ವಾರ್ಷಿಕ ಉಪನ್ಯಾಸದಲ್ಲಿ ಸ್ಪಷ್ಟಪಡಿಸಿದರು. ಕಾರ್ಪೊರೇಟ್ ವಲಯದ ಮುಖ್ಯಸ್ಥರೊಬ್ಬರು ನೋಟು ರದ್ದತಿಯನ್ನು ಬಹಿರಂಗವಾಗಿ ಟೀಕಿಸುತ್ತಿರುವುದು ಇದೇ ಮೊದಲು.

ಸರ್ಕಾರದ ಮೇಡ್ ಇನ್ ಇಂಡಿಯಾ ಯೋಜನೆಯ ಬಗ್ಗೆಯೂ ಟೀಕಿಸಿದ ಬಜಾಜ್, ನಿಯಂತ್ರಣ ಏಜೆನ್ಸಿಗಳು ಹಾಗೂ ಸರ್ಕಾರದ ಅನುಮೋದನೆಗಳು 'ಮೇಡ್ ಇನ್ ಇಂಡಿಯಾ'ವನ್ನು ವಾಸ್ತವವಾಗಿ 'ಮ್ಯಾಡ್ ಇನ್ ಇಂಡಿಯಾ' ಆಗಿ ಪರಿವರ್ತಿಸಿವೆ. ಬಾರತದಲ್ಲಿ ಯಾವುದೇ ಅನುಶೋಧನೆಗಳು ಸರ್ಕಾರದ ಅನುಮೋದನೆ ಅಥವಾ ನ್ಯಾಯಾಂಗ ಪ್ರಕ್ರಿಯೆಗೆ ಒಳಪಡುವುದಾದರೆ, ಅದು ಖಂಡಿತವಾಗಿಯೂ 'ಮೇಡ್ ಇನ್ ಇಂಡಿಯಾ'ಗೆ ನೆರವಾಗುವುದಿಲ್ಲ; ಬದಲಾಗಿ 'ಮ್ಯಾಡ್ ಇನ್ ಇಂಡಿಯಾ' ಆಗಿ ಪರಿವರ್ತನೆಯಾಗುತ್ತದೆ. ದೇಶದಲ್ಲಿ ನಾಲ್ಕು ಚಕ್ರದ ವಾಹನಗಳನ್ನು ಮಾರಾಟ ಮಾಡಲು ಅನುಮತಿ ನೀಡುವಂತೆ ಕೋರಿ ನಾಲ್ಕು ವರ್ಷಗಳಾಗಿದ್ದರೂ, ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ತಮ್ಮದೇ ಸ್ವಂತ ಉದಾಹರಣೆ ನೀಡಿದರು.

ನಾಲ್ಕು ಚಕ್ರದ ಸೈಕಲ್‌ಗಳನ್ನು ಯೂರೋಪ್, ಏಷ್ಯಾ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ಮಾರಾಟ ಮಾಡಲು ಅನುಮತಿ ಇದ್ದರೆ, ತುಲನಾತ್ಮಕವಾಗಿ ಹೆಚ್ಚು ಸ್ವಚ್ಛ, ಇಂಧನ ಕ್ಷಮತೆಯ, ಸುರಕ್ಷಿತ ಹಾಗೂ ಲಾದಾಯಕ ವಾಹನಕ್ಕೆ ಭಾರತದಲ್ಲಿ ಮಾತ್ರ ಏಕೆ ಸಮಸ್ಯೆ ಎದುರಾಗಿದೆ ಎಂದು ಬಜಾಜ್ ಪ್ರಶ್ನಿಸಿದರು. ಇಂಥ ವಾಹನ ಮಾರಾಟಕ್ಕೆ ಅನುಮತಿ ನೀಡದ ಏಕೈಕ ದೇಶ ಭಾರತ. ನಾಲ್ಕು ಚಕ್ರದ ಇಂಥ ವಾಹನ ಸಮಸ್ಯೆದಾಯಕ ಎಂಬ ಸರ್ಕಾರಿ ನಂಬಿಕೆಯಿಂದಾಗಿ ತ್ರಿಚಕ್ರ ವಾಹನಗಳನ್ನೇ ಜನ ಅವಲಂಬಿಸಬೇಕಾದ ಸ್ಥಿತಿ ಇದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News