ಉರಗಾದಿಗಳ ಸಾವಿಗೆ ಕಾರಣವಾಗುತ್ತಿರುವ ಡಾಂಬರು!

Update: 2017-02-20 18:38 GMT

ಮಾನ್ಯರೆ,

ರಸ್ತೆಗಳು ಡಾಂಬರೀಕರಣಗೊಳ್ಳುವಾಗ ಮತ್ತು ಹಾಳಾದ ರಸ್ತೆಗಳ ಗುಂಡಿಗಳಿಗೆ ತೇಪೆ ಹಾಕುವ ಕೆಲಸ ಮಾಡಲು, ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರು ಡಾಂಬರು ಡಬ್ಬಿಗಳನ್ನು ರಸ್ತೆ ಕಾಮಗಾರಿಗೆಂದು ರಸ್ತೆ ಬದಿಯಲ್ಲಿ ತಂದಿಡುತ್ತಾರೆ. ಘನ ರೂಪದಲ್ಲಿರುವ ಡಾಂಬರನ್ನು ದ್ರವರೂಪಕ್ಕೆ ತರಲು ಉರುವಲಿಗೆ ಬೆಂಕಿ ಹಾಕಿ ಕಾಯಿಸುತ್ತಾರೆ. ಅಲ್ಲಿಂದ ಡಾಂಬರನ್ನು ರಸ್ತೆ ಕಾಮಗಾರಿ ಸ್ಥಳಗಳಿಗೆ ಕಾರ್ಮಿಕರು ಸಾಗಣೆ ಮಾಡುವಾಗ ರಸ್ತೆ ಬದಿಗಳಲ್ಲಿ ಚೆಲ್ಲಾಪಿಲ್ಲಿಯಾಗಿ ಬೀಳಿಸುತ್ತಾರೆ. ಬಿದ್ದ ಡಾಂಬರು ವಿಲೇವಾರಿಯಾಗದೆ ಅಲ್ಲಿಯೇ ಉಳಿದಿರುತ್ತದೆ. ಸೆಕೆಗಾಲದಲ್ಲಿ ಸುಡು ಬಿಸಿಲ ಧಗೆಗೆ ಆ ಡಾಂಬರು ಕರಗಿರುತ್ತದೆ. ಆಹಾರ ಹುಡುಕಿ ಸಂಚರಿಸುವ ಹಾವುಗಳು ಡಾಂಬರು ಅಂಟು ದ್ರಾವಣದಲ್ಲಿ ಸಿಲುಕಿ ಸಾವು ಕಾಣುತ್ತವೆ. ಡಾಂಬರಿನಲ್ಲಿ ಹಾವು ಸಿಲುಕಿದ ವಿಷಯ ತಿಳಿದು, ಉರಗತಜ್ಞರು ಅವುಗಳನ್ನು ರಕ್ಷಿಸಿದ ತುಂಬಾ ಉದಾಹರಣೆಗಳಿವೆ. ಈಗಾಗಲೇ ಅರಣ್ಯನಾಶದಿಂದಾಗಿ ಅದೆಷ್ಟೋ ಉರಗ ಸಂತತಿ ನಾಶವಾಗಿದೆ ಮತ್ತು ಗ್ರಾಮೀಣ ಭಾಗದಲ್ಲಿ ನಡೆಯುವ ರಸ್ತೆ ಡಾಂಬರೀಕರಣ ಕಾಮಗಾರಿ ಸಂದರ್ಭ ರಸ್ತೆ ಬದಿಗಳಲ್ಲಿ ಬಿದ್ದಿರುವ ಡಾಂಬರಿನಿಂದಾಗಿ ಸರೀಸೃಪಗಳು ಸಾಯುತ್ತಿವೆ. ಅವುಗಳು ರೈತನಿಗೆ ಮಿತ್ರನಾಗಿ ಸಹಕಾರಿಯಾಗಿವೆ. ಪ್ರಕೃತಿಯಲ್ಲಿ ಅವುಗಳಿಗೂ ಬದುಕುವ ಹಕ್ಕಿದೆ. ಹಾಗಾಗಿ ರಸ್ತೆ ಕಾಮಗಾರಿ ಸಂದರ್ಭ ಗುತ್ತಿಗೆದಾರರು, ರಸ್ತೆ ಬದಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಹರಡುವ ಡಾಂಬರನ್ನು ಬಿಟ್ಟು ಹೋಗದೆ ಅಮೂಲ್ಯ ಜೀವಿಗಳ ಜೀವ ಕಾಪಾಡ ಬೇಕಾಗಿದೆ.

Writer - ತಾರಾನಾಥ್ ಮೇಸ್ತ, ಶಿರೂರು

contributor

Editor - ತಾರಾನಾಥ್ ಮೇಸ್ತ, ಶಿರೂರು

contributor

Similar News