ಸಂವಿಧಾನದ ಆಧಾರ ಸ್ತಂಬಗಳಿಂದಲೇ ಹೆಚ್ಚು ಅನ್ಯಾಯ: ಸಂತೋಷ್ ಹೆಗ್ಡೆ

Update: 2017-02-21 12:55 GMT

ಬೆಂಗಳೂರು, ಫೆ.21: ಸಂವಿಧಾನದ ಮೂರು ಆಧಾರ ಸ್ತಂಬಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದಿಂದಲೇ ಹೆಚ್ಚು ಅನ್ಯಾಯ ನಡೆಯುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ನ್ಯಾಯಪರ ವೇದಿಕೆಯ ಲಾಂಛನ, ಕೈಪಿಡಿ ಮತ್ತು ವೆಬ್‌ಸೈಟ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ, ದಬ್ಬಾಳಿಕೆಯನ್ನು ನಿಯಂತ್ರಿಸುವಲ್ಲಿ ಇಂದಿನ ಮೂರು ಅಂಗಗಳು ಸಂಪೂಣವಾರ್ಗಿ ವಿಫಲವಾಗಿವೆ ಎಂದು ಹೇಳಿದರು.

 ಸಂವಿಧಾನದಲ್ಲಿ ಪ್ರತಿಯೊಬ್ಬರಿಗೂ ಹಕ್ಕುಗಳನ್ನು ನೀಡಲಾಗಿದೆ. ಅದರಲ್ಲಿ ನ್ಯಾಯದ ಹಕ್ಕು ಒಂದಾಗಿದೆ. ಆದರೆ, ನ್ಯಾಯಾಂಗದಿಂದ ಸಿಗಬೇಕಾದ ನ್ಯಾಯ ಪೂರ್ಣ ಪ್ರಮಾಣದಲ್ಲಿ ಪ್ರಾಮಾಣಿಕರಿಗೆ ಸಿಗ್ತಿಲ್ಲ ಎಂದ ಅವರು, ಜೈಲಿಗೆ ಹೋಗಿ ಬಂದವರಿಗೆ ಹಾರ ಹಾಕಿ ಸನ್ಮಾನ ಮಾಡುತ್ತಿದ್ದಾರೆ. ಮೊದಲು ಇಂತಹ ಪದ್ಧತಿ ಬದಲಾಗಬೇಕಿದೆ ಎಂದು ತಿಳಿಸಿದರು.

ನ್ಯಾಯಾಲಯದಲ್ಲಿ ಸಾವಿರಾರು ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದುಕೊಂಡಿವೆ. ಈ ವೇಳೆಯಲ್ಲಿ ವೇದಿಕೆಯು ಕೇವಲ ನ್ಯಾಯಾಲಯದಲ್ಲಿ ದಾವೆ ಹೂಡುವುದಕ್ಕೆ ಮಾತ್ರ ಸೀಮಿತವಾಗದೆ, ನ್ಯಾಯಲಯದ ಹೊರಗೂ ನ್ಯಾಯಕ್ಕಾಗಿ ಹೋರಾಡಬೇಕು. ಅದಕ್ಕಾಗಿ ನಾನು ನಿಮಗೆ ನಿರಂತರವಾದ ಬೆಂಬಲ ನೀಡುತ್ತೇನೆ ಎಂದ ಅವರು, ಸಮಾಜದಲ್ಲಿ ಬೆಳೆದು ನಿಂತಿರುವ ಭ್ರಷ್ಟರನ್ನು ತಿರಸ್ಕರಿಸಬೇಕು ಎಂದು ಕರೆ ನೀಡಿದರು.

 ನಿವೃತ್ತ ಪೊಲೀಸ್ ಅಧಿಕಾರಿ ಅರಕೇಶ್ ಮಾತನಾಡಿ, ಕಾನೂನು ಪರಿಪಾಲಿಸಬೇಕಾದ ಪೊಲೀಸ್ ಇಲಾಖೆಯಿಂದು ವಿಐಪಿಗಳನ್ನು ರಕ್ಷಣೆ ಮಾಡಲು, ಹಣ ಬರುವ ದಾರಿಗಳಿರುವ ಪ್ರಕರಣಗಳನ್ನು ತನಿಖೆ ಮಾಡಲು, ಜನರು ರೊಚ್ಚಿಗೆದ್ದಾಗ ಅವರ ಮೇಲೆ ಕಾನೂನು ಬಳಸಲು ಬಳಸಿಕೊಳ್ಳಲಾಗುತ್ತಿದೆ ಹೊರತು ಸಾಮಾನ್ಯ ಜನರಿಗೆ ರಕ್ಷಣೆ ನೀಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ಸಾಮಾನ್ಯಜನರಿಗೆ ಪೊಲೀಸ್ ಇಲಾಖೆ ಮೇಲಿನ ನಂಬಿಕೆ ಇಲ್ಲದಂತಾಗುತ್ತಿದೆ. ಮತ್ತೊಂದು ಕಡೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಬಯಸುವ ನ್ಯಾಯಾಲಯಗಳಿಂದ ನ್ಯಾಯ ಮರೀಚಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯದ ಪರವಾಗಿ ಹೋರಾಡಲು ಮುಂದಾದ ವೇದಿಕೆ ಮೂಲಕ ಸಮಾಜದಲ್ಲಿ ಸರ್ವರಿಗೂ ನ್ಯಾಯ ಸಿಗುವಂತಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ್ತಿ ಡಾ.ರುತ್ ಮನೋರಮ, ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಜಿ.ಎ.ಬಾವಾ, ಅಧ್ಯಕ್ಷ ಕೆ.ಬಿ.ಸಂತೋಷ್ ಸೇರಿದಂತೆ ಇನ್ನಿತರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News