ನಂದಿ ಬೆಟ್ಟದ ತಪ್ಪಲಲ್ಲಿ ಕುಸ್ತಿ ಅಕಾಡಮಿ ಸ್ಥಾಪನೆ: ಶಾಸಕ ಡಾ.ಸುಧಾಕರ್

Update: 2017-02-25 13:32 GMT

ಬೆಂಗಳೂರು, ಫೆ. 25: ವಿಶ್ವಖ್ಯಾತ ಪ್ರವಾಸಿ ತಾಣವಾದ ಬೆಂಗಳೂರು ಹೊರವಲಯದ ನಂದಿ ಗಿರಿಧಾಮದ ತಪ್ಪಲಿನಲ್ಲಿ ಕುಸ್ತಿ ಅಕಾಡಮಿ ಆರಂಭವಾಗಲಿದ್ದು, ಇದಕ್ಕಾಗಿ 2 ಎಕರೆ ಜಮೀನು ನೀಡಲಾಗುವುದು ಎಂದು ಶಾಸಕ ಡಾ.ಸುಧಾಕರ್ ಭರವಸೆ ನೀಡಿದ್ದಾರೆ.

ಶನಿವಾರ ಇಲ್ಲಿನ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಮಹಿಳಾ ಆತ್ಮರಕ್ಷಣೆ ಮತ್ತು ಯೋಗ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂತಾರಾಷ್ಟ್ರೀಯ ಕುಸ್ತಿಪಟುಗಳಾದ ಫೋಗಟ್ ಸಹೋದರಿಯರಾದ ಬಬಿತಾ ಫೋಗಟ್ ಮತ್ತು ಗೀತಾ ಫೋಗಟ್ ಬೆಂಗಳೂರು ಸುತ್ತಮುತ್ತಲಿನ ಮಹಿಳೆಯರಿಗೆ ಆತ್ಮರಕ್ಷಣೆಯ ಪಟ್ಟುಗಳನ್ನು ಕಲಿಸಿಕೊಡಬೇಕು ಎಂದರು.

ಆ ಹಿನ್ನೆಲೆಯಲ್ಲಿ ದೇವನಹಳ್ಳಿ ಸಮೀಪ ಕುಸ್ತಿ ಅಕಾಡಮಿ ಸ್ಥಾಪಿಸಲಿದ್ದು, ಇದಕ್ಕಾಗಿ 2 ಎಕರೆ ಜಮೀನ್ನು ನೀಡಲಾಗುವುದು. ಈ ಮೂಲಕ ಸಾವಿರಾರು ಮಹಿಳೆಯರು, ಯುವತಿಯರಿಗೆ ಬಬಿತಾ ಮತ್ತು ಗೀತಾ ಫೋಗಟ್ ಅವರು ಆತ್ಮರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು? ಸಮಸ್ಯೆಗೆ ಸಿಲುಕಿದ ಇತರೆ ಮಹಿಳೆಯರನ್ನು ರಕ್ಷಣೆ ಮಾಡುವುದು ಹೇಗೆ? ಎಂಬುದನ್ನು ಕಲಿಸಕೊಡಲಿದ್ದಾರೆ ಎಂದು ತಿಳಿಸಿದರು.

ಬಬಿತಾ ಮತ್ತು ಗೀತಾ ನಿಜವಾದ ಸ್ಟಾರ್‌ಗಳಾಗಿದ್ದಾರೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಆತ್ಮಸ್ಥೈರ್ಯ ಮತ್ತು ಆತ್ಮಧೈರ್ಯ ತುಂಬುವ ಆಶಾಕಿರಣ. ಇವರಿಬ್ಬರೂ ಮಹಿಳಾ ದೌರ್ಜನ್ಯದ ವಿರುದ್ಧ ಹೋರಾಟ ಮಾಡುತ್ತಾ ದೇಶದ ಮಹಿಳೆಯರನ್ನು ಎಚ್ಚರಗೊಳ್ಳುವಂತೆ ಮಾಡುತ್ತಿದ್ದಾರೆ.

ಇವರಿಬ್ಬರ ಯಶೋಗಾಥೆಯ ಪಟ್ಟುಗಳನ್ನು ಕಲಿತರೆ ಪ್ರತಿಯೊಬ್ಬ ಮಹಿಳೆಯೂ ಆತ್ಮರಕ್ಷಣೆ ಮಾಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿಯೆ ಕುಸ್ತಿಯನ್ನು ಫೋಗಟ್ ಸಹೋದರಿಯರ ರಾಜ್ಯವಾದ ಹರ್ಯಾಣದಿಂದ ಹೊರಗೂ ಹೆಚ್ಚು ಪ್ರಚಲಿತವಾಗುವಂತೆ ಮಾಡುವ ಉದ್ದೇಶದಿಂದ ನಂದಿಬೆಟ್ಟದ ತಪ್ಪಲಿನಲ್ಲಿ ಕುಸ್ತಿ ಅಕಾಡೆಮಿ ಸ್ಥಾಪಿಸಲು ನಿರ್ಧರಿಸಿರುವುದು ಎಂದು ಸುಧಾಕರ್ ತಿಳಿಸಿದರು.

ಗ್ರಾಂಡ್ ಮಾಸ್ಟರ್ ಅಕ್ಷರ್ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ಕಾರ್ಯಾಗಾರದಲ್ಲಿ ಸಾವಿರಾರು ಮಹಿಳೆಯರು ಪಾಲ್ಗೊಳ್ಳುತ್ತಿರುವುದರಲ್ಲಿ ಸಿಗುವ ಸಂತಸ ಬೇರೆ ಯಾವುದರಿಂದಲೂ ಸಿಗಲು ಸಾಧ್ಯವಿಲ್ಲ. ಈ ಎರಡು ದಿನ ಮಹಿಳೆಯರಿಗೆ ಮಾನಸಿಕ ಸ್ಥೈರ್ಯ, ಆತ್ಮರಕ್ಷಣೆ ಕೌಶಲ್ಯಗಳು ಮತ್ತು ಯೋಗದ ತಂತ್ರಗಳನ್ನು ಕಲಿಯಲು ಸಾಕಷ್ಟು ನೆರವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಬಬಿತಾ ಕುಮಾರಿ, ನನಗೆ ಮತ್ತು ನನ್ನ ಸಹೋದರಿಗೆ ಬಾಲ್ಯಾವಸ್ಥೆಯಿಂದಲೂ ಮಹಿಳಾ ಪೀಡಕರ ವಿರುದ್ಧ ಹೋರಾಟ ಮಾಡುವುದು ದೈನಂದಿನ ಅಭ್ಯಾಸದ ರೀತಿಯಾಗಿದೆ. ಆತ್ಮರಕ್ಷಣೆಯ ಬಗ್ಗೆ ತರಬೇತಿ ಪಡೆಯಲು ಬೆಂಗಳೂರಿನ ಮಹಿಳೆಯರು ಇಲ್ಲಿಗೆ ಆಗಮಿಸಿರುವುದು ಸಂತಸವೆನಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News