×
Ad

ಹಿರಿಯ ಸಚಿವರನ್ನು ಕೈ ಬಿಡುವುದಿಲ್ಲ: ಮುಖ್ಯಮಂತ್ರಿ

Update: 2017-02-26 19:35 IST

ಬೆಂಗಳೂರು, ಫೆ.26: ನಾಲ್ಕು ವರ್ಷ ಪೂರೈಸಿರುವ ಸಚಿವರನ್ನು ಸಂಪುಟದಿಂದ ಕೈ ಬಿಡುವ ಪ್ರಸ್ತಾವನೆಯೆ ನಮ್ಮ ಮುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದ್ದಾರೆ.

ರವಿವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಸಚಿವರನ್ನು ಕೈ ಬಿಡಲಾಗುತ್ತದೆ ಎಂಬುದು ಮಾಧ್ಯಮಗಳ ಸೃಷ್ಠಿ. ಅಂತಹ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದರು.

ಸಚಿವ ಸಂಪುಟದಲ್ಲಿ ಖಾಲಿಯಿರುವ ಎರಡು ಸ್ಥಾನಗಳನ್ನು ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆದ ಬಳಿಕ ಭರ್ತಿ ಮಾಡಲಾಗುವುದು ಎಂದು ಅವರು ಹೇಳಿದರು.

2018ರ ವಿಧಾನಸಭಾ ಚುನಾವಣೆಯಲ್ಲಿ ನಾವು ಮತ್ತೆ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದೆ ಬರುತ್ತೇವೆ ಎಂಬುದು ನನ್ನ ಬಲವಾದ ನಂಬಿಕೆ. ಅದರಲ್ಲಿ ಯಾವುದೆ ಅನುಮಾನ ಬೇಡ. ರಾಜ್ಯ ಸರಕಾರದ ತೇಜೋವಧೆ ಮಾಡಲು ಬಿಜೆಪಿ ಪ್ರಯತ್ನ ಪಡುತ್ತಿದ್ದು, ಅದಕ್ಕೆ ಕೇಂದ್ರ ಬಿಜೆಪಿಯು ಸಹಕಾರ ನೀಡುತ್ತಿದೆ. ಆದರೆ, ಅವರು ಯಶಸ್ಸುಗಳಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ವಿಧಾನಪರಿಷತ್ ಸದಸ್ಯ ಕೆ.ಗೋವಿಂದರಾಜು ಈಗಾಗಲೆ ಆ ಡೈರಿ ತನ್ನದಲ್ಲ, ಅಲ್ಲದೆ, ಅದರಲ್ಲಿರುವ ಹಸ್ತಲಿಪಿಯು ನನ್ನದಲ್ಲ ಎಂದು ಕಳೆದ ವರ್ಷ ಮಾರ್ಚ್‌ನಲ್ಲೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಆದರೆ, ಬಿಜೆಪಿ ನಮ್ಮ ವಿರುದ್ಧ ಆಧಾರ ರಹಿತವಾದ ಆರೋಪಗಳನ್ನು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಕಿಡಿಗಾರಿದರು.

 ಬಿಜೆಪಿಯವರು ನಮ್ಮ ವಿರುದ್ಧ ಹೋರಾಟ ಮಾಡುವುದಾದರೆ ಮಾಡಲಿ, ನಮಗೆ ಹೋರಾಟ ಹೊಸದೇನಲ್ಲ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿರುವ ಪಕ್ಷ ನಮ್ಮದು. ನಾವು ಅಧಿಕಾರದಲ್ಲಿ ಇರುವುದರಿಂದ, ಬಿಜೆಪಿಯವರಂತೆ ನಾವು ಮಾಡಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಮೇಕೆದಾಟು ಯೋಜನೆಗೆ ಬದ್ಧ: ಮೇಕೆದಾಟು ಬಳಿ ಜಲಾಶಯ ನಿರ್ಮಿಸುವ ಯೋಜನೆಯನ್ನು ರಾಜ್ಯ ಸರಕಾರ ಕೈ ಬಿಡುವುದಿಲ್ಲ. ಈ ಯೋಜನೆ ಅನುಷ್ಠಾನಕ್ಕೆ ಕಾನೂನು, ತಾಂತ್ರಿಕವಾಗಿ ಯಾವುದೆ ಸಮಸ್ಯೆಯಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಣೆ ನೀಡಿದರು.

ಕಾವೇರಿ ನ್ಯಾಯಾಧೀಕರಣ ನೀಡಿರುವ ಐತೀರ್ಪಿನಲ್ಲಿ ಸಾಮಾನ್ಯ ವರ್ಷದಲ್ಲಿ ತಮಿಳುನಾಡಿಗೆ ರಾಜ್ಯ ಸರಕಾರ 192 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಅದನ್ನು ನಾವು ಬಿಡುಗಡೆ ಮಾಡುತ್ತೇವೆ. ನಾವು ನಮ್ಮ ರಾಜ್ಯದ ಮಿತಿಯಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್‌ಚ್ಛಕ್ತಿ ಉತ್ಪಾದನೆಗೆ ಈ ಜಲಾಶಯ ನಿರ್ಮಿಸುತ್ತಿದ್ದೇವೆ ಎಂದು ಅವರು ಹೇಳಿದರು.

ತಮಿಳುನಾಡು ಸರಕಾರ ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗುತ್ತಿದೆ. ಆದುದರಿಂದ, ಸತ್ಯಾಂಶವನ್ನು ಒಪ್ಪಿಕೊಳ್ಳಲು ಅವರು ತಯಾರಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News