3.2 ಕೋ.ರೂ.ಮೌಲ್ಯದ ಮರ್ಸಿಡಿಸ್ ಮೇಬ್ಯಾಕ್ ಕಾರು ಖರೀದಿಸಿದ ಬೆಂಗಳೂರಿನ ಕ್ಷೌರಿಕ....!

Update: 2017-03-02 09:29 GMT
ತನ್ನ ಮೇಬ್ಯಾಕ್‌ನೊಂದಿಗೆ ರಮೇಶ ಬಾಬು

ಬೆಂಗಳೂರು,ಮಾ.2: ಬೆಂಗಳೂರು ನಿವಾಸಿ ರಮೇಶ ಬಾಬು ಕಳೆದ ತಿಂಗಳು ಹೊಸ ಕಾರು ಖರೀದಿಸಿದ್ದಾರೆ. ಅದರಲ್ಲೇನು ವಿಶೇಷ......ಗಳಿಕೆ ಚೆನ್ನಾಗಿದ್ದರೆ ಯಾರೂ ಕಾರು ಖರೀದಿಸಬಹುದು ಎನ್ನುತ್ತೀರಾ..? ಸ್ವಲ್ಪ ನಿಲ್ಲಿ...ಈ ರಮೇಶ ಬಾಬು ಖರೀದಿಸಿದ್ದು ಜರ್ಮನಿಯಲ್ಲಿ ತಯಾರಾಗಿರುವ ಮರ್ಸಿಡಿಸ್ ಮೇಬ್ಯಾಕ್ ಕಾರನ್ನು ಮತ್ತು ಈ ಕಾರಿನ ಬೆಲೆ ಬರೋಬ್ಬರಿ 3.2 ಕೋ.ರೂ.ಗಳು. ವಿಶೇಷವೆಂದರೆ ಈ ರಮೇಶ ಬಾಬು ವೃತ್ತಿಯಲ್ಲಿ ಕ್ಷೌರಿಕ!

ಬೌರಿಂಗ್ ಇನ್ಸ್ಟಿಟ್ಯೂಟ್‌ನಲ್ಲಿ ಸಲೂನ್ ಹೊಂದಿರುವ ರಮೇಶ ಬಾಬು ಪ್ರತಿ ಹೇರ್‌ಕಟ್‌ಗೆ 75 ರೂ.ಶುಲ್ಕ ವಿಧಿಸುತ್ತಾರೆ. ಐಷಾರಾಮಿ ಕಾರುಗಳನ್ನು ಖರೀದಿಸಿ ಅವುಗಳನ್ನು ಬಾಡಿಗೆಗೆ ನೀಡುತ್ತಾರೆ.

 ಮರ್ಸಿಡಿಸ್ ಮೇಬ್ಯಾಕ್ ಅವರ ಇತ್ತೀಚಿನ ಖರೀದಿ. ಕಳೆದ ತಿಂಗಳು ನೇರವಾಗಿ ಜರ್ಮನಿಯಿಂದ ಆಮದಾಗಿದೆ. ಮಾಜಿ ಮದ್ಯದ ದೊರೆ ವಿಜಯ ಮಲ್ಯ ಮತ್ತು ಓರ್ವ ಬಿಲ್ಡ್‌ರ್ ನಂತರ ಮರ್ಸಿಡಿಸ್ ಮೇಬ್ಯಾಕ್ ಕಾರನ್ನು ಹೊಂದಿರುವ ಬೆಂಗಳೂರಿನ ಮೂರನೇ ವ್ಯಕ್ತಿ ಈ ರಮೇಶ ಬಾಬು.

 ರೋಲ್ಸ್ ರಾಯ್ಸ್, 11 ಮರ್ಸಿಡಿಸ್, 10 ಬಿಎಂಡಬ್ಲು, 3 ಆಡಿ ಮತ್ತು 2 ಜಾಗ್ವಾರ್‌ಗಳು ಸೇರಿದಂತೆ ಸುಮಾರು 150 ಐಷಾರಾಮಿ ಕಾರುಗಳ ಒಡೆಯನಾಗಿರುವ ರಮೇಶ ಬಾಬು ರಮೇಶ ಟೂರ್ಸ್‌ ಆ್ಯಂಡ್ ಟ್ರಾವೆಲ್ಸ್‌ನ ಮಾಲಕರೂ ಹೌದು.

ಇಷ್ಟೆಲ್ಲ ಇರುವ ರಮೇಶ ಬಾಬು ಮನಸ್ಸು ಮಾಡಿದರೆ ಜೀವನವಿಡೀ ಯಾವುದೇ ಕೆಲಸವನ್ನೂ ಮಾಡದೆ ಕುಳಿತು ಉಣ್ಣಬಹುದು. ಆದರೆ ಇಂದಿಗೂ ಕಳೆದ 30 ವರ್ಷಗಳಿಂದ ಮಾಡುತ್ತಿರುವ ಕೆಲಸವನ್ನೇ ಮಾಡುತ್ತಿದ್ದಾರೆ. ತನ್ನ ಸಲೂನಿನಲ್ಲಿ ಪ್ರತಿದಿನ ಕನಿಷ್ಠ ಐದು ಗಂಟೆ ಕಾಲ ಕೈಯಲ್ಲಿ ಕತ್ತರಿ ಹಿಡಿದು ಹೇರ ಕಟಿಂಗ್ ಮಾಡುತ್ತಾರೆ. ಅವರ ಖಾಯಂ ಗಿರಾಕಿಗಳಿದ್ದು, ಅವರಿಗೆ ರಮೇಶ ಬಾಬುವೇ ತಲೆಯ ಮೇಲೆ ಕತ್ತರಿಯಾಡಿಸಬೇಕು. ವೃತ್ತಿಪರ ಕ್ಷೌರಿಕನಾಗಿ ತನ್ನ ಬೇರುಗಳನ್ನು ಮರೆಯಲು ರಮೇಶ ಬಯಸಿಲ್ಲ. ಆದರೆ ಇತರ ಕ್ಷೌರಿಕರು ತಮ್ಮ ಸಲೂನ್ಗಳಿಗೆ ಹೇಗಾದರೂ ಬಂದುಕೊಳ್ಳಲಿ.....ನಮ್ಮ ರಮೇಶ ಬಾಬು ಮಾತ್ರ ಕೆಲಸಕ್ಕೆ ಬರುವುದು ತನ್ನ ರೋಲ್ಸ್ ರಾಯ್ಸ್ ಘೋಸ್ಟ್ ಕಾರಿನಲ್ಲಿ !

 ರಮೇಶ ಬಾಬು (45) ಕಳೆದ ತಿಂಗಳು ಸ್ವಂತ ದುಡ್ಡಿನ ಜೊತೆಗೆ ಬ್ಯಾಂಕಿನಿಂದ ದೊಡ್ಡ ಮೊತ್ತದ ಸಾಲ ಪಡೆದು ಮರ್ಸಿಡಿಸ್ ಮೇಬ್ಯಾಕ್ ಖರೀದಿಸಿದ್ದಾರೆ. ಸಲೂನಿನಿಂದ ಪರವಾಗಿಲ್ಲ ಎನ್ನುವ ಆದಾಯವಿದೆ, ಆದರೆ ಶ್ರೀಮಂತ ಗ್ರಾಹಕರೊಂದಿಗೆ ಉತ್ತಮ ನೆಟ್‌ವರ್ಕ್ ಹೊಂದಿರುವ ಅವರು ಐಷಾರಾಮಿ ಕಾರುಗಳನ್ನು ಬಾಡಿಗೆಗೆ ನೀಡುವ ತನ್ನ ಟ್ರಾವೆಲ್ಸ್ ದಂಧೆಯನ್ನು ಹುಲುಸಾಗಿ ಬೆಳೆಸಿದ್ದು, ಎರಡೂ ಕೈಗಳಿಂದ ಲಾಭ ಬಾಚುತ್ತಿದ್ದಾರೆ.

ವಿಜಯ ಮಲ್ಯ ಬಂಗಾರದ ಬಣ್ಣದ ಮರ್ಸಿಡಿಸ್ ಮೇಬ್ಯಾಕ್ ಹೊಂದಿದ್ದರಾದರೂ ಅವರು ದೇಶ ಬಿಟ್ಟು ಪರಾರಿಯಾದ ಮೇಲೆ ಆ ಕಾರು ಬೆಂಗಳೂರಿನಲ್ಲೆಲ್ಲೂ ಕಣ್ಣಿಗೆ ಬೀಳುತ್ತಿಲ್ಲ. ಅದನ್ನು ಮಾರಾಟ ಮಾಡಲಾಗಿದೆ ಎಂದು ಕೆಲವರು ಹೇಳುತ್ತಿದ್ದರೆ, ಅದನ್ನು ಯುಬಿ ಸಿಟಿ ಆವರಣದಲ್ಲಿ ಪಾರ್ಕ್‌ಮಾಡಲಾಗಿದೆ ಎಂದು ಇತರ ಕೆಲವರು ಹೇಳುತ್ತಿದ್ದಾರೆ.

ದೇವರು ತನ್ನ ಜೊತೆ ಇದ್ದಾನೆ ಮತ್ತು ಇಲ್ಲಿಯವರೆಗೆ ತಲುಪಲು ತಾನು ತುಂಬ ಕಷ್ಟಪಟ್ಟಿದ್ದೇನೆ. ಮಾರುಕಟ್ಟೆಗೆ ಬರುವ ಪ್ರತಿಯೊಂದೂ ಐಷಾರಾಮಿ ಕಾರನ್ನು ಖರೀದಿಸುವುದು ತನ್ನ ಕನಸಾಗಿದೆ. ರೋಲ್ಸ್ ರಾಯ್ಸ ನಂತರ ಈಗ ಮೇಬ್ಯಾಕ್ ಬಂದಿದೆ. ಓಡಿಸಲು ತುಂಬ ಖುಷಿಯಾಗುತ್ತದೆ ಎನ್ನುತ್ತಾರೆ ರಮೇಶ ಬಾಬು.

ಆದರೆ ತನ್ನ ಮೂಲವನ್ನು ಮರೆಯಲು ಅವರು ಸಿದ್ಧರಿಲ್ಲ, ತಾನು ಕಷ್ಟ ಪಟ್ಟಿದ್ದನ್ನು ಸಹ. ತಂದೆಯ ನಿಧನದ ಬಳಿಕ ತಾಯಿ ಕಡು ಬಡತನದಲ್ಲಿ ಎಷ್ಟೊಂದು ಕಷ್ಟಪಟ್ಟು ತನ್ನನ್ನು ಬೆಳೆಸಿದ್ದನ್ನಂತೂ ಸತ್ತರೂ ಮರೆಯುವುದಿಲ್ಲ ಎನ್ನುವ ರಮೇಶ ಬಾಬು, ಹೀಗಾಗಿ ಸಲೂನಿನಲ್ಲಿ ಹೇರ್ ಕಟಿಂಗ್ ಮಾಡುವುದನ್ನು ಬಿಟ್ಟಿಲ್ಲ ’’ ಎನ್ನುತ್ತಾರೆ.

1979ರಲ್ಲಿ ತಂದೆ ತೀರಿಕೊಂಡಾಗ ರಮೇಶ ಬಾಬುಗೆ ಕೇವಲ ಒಂಭತ್ತು ವರ್ಷ. ಬಡತನದಲ್ಲಿಯೇ ಎಸ್‌ಎಸ್‌ಎಲ್‌ಸಿ ವರೆಗೆ ಓದಿದ ಅವರು ಬಳಿಕ ವಿದಾಭ್ಯಾಸವನ್ನು ತೊರೆದು ತಂದೆಯಂತೆ ಕ್ಷೌರಿಕ ವೃತ್ತಿಯನ್ನೇ ಅಪ್ಪಿಕೊಂಡಿದ್ದರು.

ಒಳ್ಳೆಯ ಕೇಶ ವಿನ್ಯಾಸಗಾರನಾಗಿ ಹೆಸರು ಮಾಡಿದ ಅವರ ಅದೃಷ್ಟ 1994ರಲ್ಲಿ ಮಾರುತಿ ಓಮ್ನಿ ವ್ಯಾನ್ ಖರೀದಿಸಿದ ಬಳಿಕ ಬದಲಾಗಿತ್ತು. ಅದನ್ನು ಬಾಡಿಗೆಗೆ ನೀಡಲು ಆರಂಭಿಸಿದ ರಮೇಶ ಬಾಬು ಅಲ್ಲಿಂದೀಚೆಗೆ ಹಿಂದಿರುಗಿ ನೋಡಿಲ್ಲ.

ತನ್ನ ಬಳಿ ಇರುವ ಸುಮಾರು 150 ಐಷಾರಾಮಿ ಕಾರುಗಳ ಪೈಕಿ ಕೆಲವನ್ನು ಸ್ವತಃ ರಮೇಶ ಬಾಬುವೇ ಓಡಿಸುತ್ತಾರೆ ಅಥವಾ ಒಳ್ಳೆಯ ಗ್ರಾಹಕರು ದೊರೆತರೆ ಬಾಡಿಗೆಗೆ ನೀಡುತ್ತಾರೆ. 2011ರಲ್ಲಿ ರೋಲ್ಸ್ ರಾಯ್ಸ್ ಖರೀದಿಸಿದಾಗ ಜಾಗತಿಕ ಗಮನವನ್ನು ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News