ಕೆಪಿಎಸ್ಸಿ 2011ನೆ ಸಾಲಿನ ಅಭ್ಯರ್ಥಿಗಳ ನೇಮಕ ವಿಚಾರ: ಸರಕಾರದ ನಿರ್ಧಾರಕ್ಕೆ ದಲಿತ ಸಂಘಟನೆಗಳ ಮೆಚ್ಚುಗೆ

Update: 2017-03-04 10:23 GMT

ಬೆಂಗಳೂರು, ಮಾ.4: ಕೆಪಿಎಸ್ಸಿ 2011ನೆ ಸಾಲಿನ ಅಭ್ಯರ್ಥಿಗಳ ನೇಮಕ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ದಲಿತ ಸಂಘಟನೆಗಳು ಸ್ವಾಗತಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಕರೆದಿದ್ದ ಬಜೆಟ್ ಪೂರ್ವ ಸಮಾಲೋಚನೆಯಲ್ಲಿ ಭಾಗವಹಿಸಿದ್ದ ದಲಿತ ಸಂಘಟನೆಗಳ ಮುಖಂಡರು ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 362 ಅಭ್ಯರ್ಥಿಗಳ ನೇಮಕ ನಿರ್ಧಾರ ಕ್ರಾಂತಿಕಾರಕ ಹೆಜ್ಜೆ. ರಾಜ್ಯದ ಇತಿಹಾಸದಲ್ಲಿ ಕೈಗೊಂಡಿರುವ ದಿಟ್ಟ ನಿರ್ಣಯ ಇದಾಗಿದೆ ಎಂದು ದಲಿತ ಸಂಘಟನೆಗಳ ಮುಖಂಡರಾದ ಮಾವಳ್ಳಿ ಶಂಕರ್, ಮಾರಸಂದ್ರ ಮುನಿಯಪ್ಪಮತ್ತಿತರರು ಹೇಳಿದರು. ಸರ್ಕಾರ ಉತ್ತಮ ನಿರ್ಧಾರಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ವಿರೋಧ ಹೆಚ್ಚಾಗುವುದು ಸಹಜ. ಅದಕ್ಕೆ ಮುಖ್ಯಮಂತ್ರಿ ಎದೆಗುಂದಬಾರದು ಎಂದರು.

ಸರ್ಕಾರದ ಈ ತೀರ್ಮಾನವನ್ನು ತಳ ಸಮುದಾಯಗಳು ಅತ್ಯಂತ ಪ್ರೀತಿಯಿಂದ ಸ್ವಾಗತಿಸುತ್ತವೆ. ಕೆಲವರು ಇದನ್ನು ತಡೆಯುವ ಪ್ರಯತ್ನ ಮಾಡಿದ್ದರು. ಷಡ್ಯಂತ್ರ ರೂಪಿಸಿದ್ದರು. ಪಿತೂರಿಗೆ ಬಗ್ಗದೆ ಮುಖ್ಯಮಂತ್ರಿ ಕೈಗೊಂಡ ನಿರ್ಧಾರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು. ಬಳಿಕ ದಲಿತ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿಯವರನ್ನು ಅಭಿನಂದಿಸಿ, ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News