‘ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲಿಸೋಲ್ಲ’ : ಬಿಎಸ್‌ವೈ ವಿರುದ್ಧ ಈಶ್ವರಪ್ಪ ಮತ್ತೆ ಗುಟುರು

Update: 2017-03-04 14:15 GMT

ಬೆಂಗಳೂರು, ಮಾ.4: ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮತ್ತು ಮುಖಂಡರ ಅಮಾನತ್ತು ಆದೇಶ ಹಿಂಪಡೆಯಬೇಕೆಂದು ತನ್ನ ಪಟ್ಟು ಮುಂದುವರಿಸಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಯಾವುದೇ ಕಾರಣಕ್ಕೂ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ನಿಲ್ಲುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಹೀಗಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ಕೆ.ಎಸ್.ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟ ತಾರಕಕ್ಕೇರಿದೆ. ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಷಾ ಸಂಧಾನದ ಬಳಿಕವೂ ಉಭಯ ನಾಯಕರ ಮಧ್ಯೆ ಜಂಗೀಕುಸ್ತಿ ನಿಂತಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ.

ಶನಿವಾರ ನಗರದ ಆನಂದ ರಾವ್ ವೃತ್ತ ಸಮೀಪದಲ್ಲಿನ ಕೆಇಬಿ ಎಂಜಿನಿಯರಿಂಗ್ ಸಭಾಂಗಣದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ರಾಜ್ಯ ಪದಾಧಿಕಾರಿಗಳ ಪದ ಗ್ರಹಣ ಸಮಾರಂಭದಲ್ಲಿ ಕೆ.ಎಸ್.ಈಶ್ವರಪ್ಪ ಪಾಲ್ಗೊಂಡಿದ್ದರು. ಅಲ್ಲದೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದರು.

ಗೊಂದಲ ಸತ್ಯ: ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ, ಮುಖಂಡರ ಅಮಾನತ್ತು ಆದೇಶ ಹಿಂಪಡೆಯುವುದು ಸೇರಿದಂತೆ ಪಕ್ಷದಲ್ಲಿನ ಭಿನ್ನಾಭಿಪ್ರಾಯ ಬಗೆಹರಿಸಲು ಅಮಿತ್ ಷಾ ಸೂಚನೆಯಂತೆ ಯಡಿಯೂರಪ್ಪನವರು ಈವರೆಗೂ ಇನ್ನೂ ಸಭೆ ಕರೆದಿಲ್ಲ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯಲ್ಲಿ ಗೊಂದಲ, ಅಸಮಾಧಾನ ಇರುವುದು ಸತ್ಯ. ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ ತುಮಕೂರಿನಲ್ಲಿ ಎ.ಎಸ್.ರವೀಂದ್ರನಾಥ್, ಮೇಲ್ಮನೆ ಸದಸ್ಯರಾದ ಸೋಮಣ್ಣ ಬೇವಿನಮರದ ಸೇರಿದಂತೆ ಲಿಂಗಾಯತ ಮುಖಂಡರು ಸಭೆ ನಡೆಸಿದ್ದಾರೆ. ಹೀಗಾಗಿ ಬಿಎಸ್‌ವೈ ಅವರಿಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ. ಕೂಡಲೇ ಸಭೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಆಗ್ರಹಿಸಿದರು.

ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಸಂಬಂಧ ಅಮಿತ್ ಷಾ ಸೂಚನೆಯಂತೆ ಬಿಎಸ್‌ವೈ, ಮುಖಂಡರಾದ ಸಂತೋಷ್, ಉಸ್ತುವಾರಿ ಮುರಳೀಧರ ರಾವ್, ಅರುಣ್ ಕುಮಾರ್ ಅಭಿಪ್ರಾಯ ಸಂಗ್ರಹಿಸಿ, ವರದಿ ನೀಡಬೇಕಿತ್ತು. ಆದರೆ, ಈ ಬಗ್ಗೆ ಗಮನಹರಿಸದಿರುವುದು ಅಸಮಾಧಾನ ತಂದಿದೆ ಎಂದು ಕಿಡಿಕಾರಿದರು.

ರಾಷ್ಟ್ರೀಯಾಧ್ಯಕ್ಷ ಅಮಿತ್ ಷಾ ‘ನನಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಚಟುವಟಿಕೆ ಸ್ಥಗಿತಗೊಳಿಸಿ’ ಎಂದು ಸೂಚಿಸಿಲ್ಲ. ಬ್ರಿಗೇಡ್ ಚಟುವಟಿಕೆಗಳಿಗೂ ಮತ್ತು ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಆದುದರಿಂದ ಬ್ರಿಗೇಡ್ ಸಭೆ, ಸಮಾವೇಶಗಳಲ್ಲಿ ತಾನೂ ಪಾಲ್ಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಪಟ್ಟಿ ಬದಲಾವಣೆ: ಮೈಸೂರು, ಚಾಮರಾಜನಗರ, ತುಮಕೂರು, ದಾವಣಗೆರೆ, ಹಾವೇರಿ, ಬಳ್ಳಾರಿ, ಬೀದರ್, ಕಲಬುರಗಿ, ಬೆಳಗಾವಿ ಜಿಲ್ಲೆ ಜಿಲ್ಲಾಧ್ಯಕ್ಷರುಗಳು ಹಾಗೂ ವಿವಿಧ ಮೋರ್ಚಾಗಳ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳನ್ನು ಬದಲಾವಣೆ ಮಾಡಬೇಕೆಂಬುದು ಈಶ್ವರಪ್ಪ ಬೆಂಬಲಿಗರ ಆಗ್ರಹವಾಗಿದೆ.

ಸಭೆಯಲ್ಲಿ ಬ್ರಿಗೇಡ್ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಕಾರ್ಯಾಧ್ಯಕ್ಷ ಕೆ.ಮುಕುಡಪ್ಪ, ಗೌರವಾಧ್ಯಕ್ಷ ಎನ್.ಪುಟ್ಟಸ್ವಾಮಿ, ಉಪಾಧ್ಯಕ್ಷ ಸೋಮಶೇಖರ್, ಖಜಾಂಚಿ ಬಳಗಾವಿ, ವೆಂಕಟೇಶ್‌ಮೂರ್ತಿ, ರೇಖಾ ಹುಲಿಯಪ್ಪಗೌಡ, ಯಂಜೂರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News