ಕರಾವಳಿ ಆರೆಸ್ಸೆಸ್ ನಿಯಂತ್ರಣದಲ್ಲಿದೆಯೇ: ದೇವೇಗೌಡ ಆತಂಕ

Update: 2017-03-04 14:21 GMT

ಬೆಂಗಳೂರು, ಮಾ.4: ಕರಾವಳಿ ಪ್ರದೇಶಗಳ ಆಡಳಿತವನ್ನು ಸರಕಾರದ ಬದಲಾಗಿ ಆರೆಸ್ಸೆಸ್ ನಡೆಸುತ್ತಿದೆಯೆಂಬ ಅನುಮಾನ ಕಾಡುತ್ತಿದ್ದು, ಭದ್ರತಾ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಂಗಳೂರು, ಉಡುಪಿ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಸರಕಾರವಿದೆಯೇ ಎಂಬಷ್ಟರ ಮಟ್ಟಿಗೆ ಆಡಳಿತ ವ್ಯವಸ್ಥೆ ವಿಫಲವಾಗಿದ್ದು, ಸಂಘಪರಿವಾರದ ಉಪಟಳ ಮಿತಿ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರು ಆಗಮಿಸಿದ ಸಂದರ್ಭದಲ್ಲಿ ಎಲ್ಲೆಲ್ಲೂ ಆತಂಕದ ವಾತಾವರಣವೇ ನಿರ್ಮಾಣವಾಗಿತ್ತು. ಯಾವ ಕ್ಷಣದಲ್ಲಿ ಏನು ಆಗುತ್ತದೋ ಎಂಬ ಭಯದಿಂದಲೇ ಅಲ್ಲಿನ ಜನತೆ ದಿನದೂಡಿದ್ದಾರೆ. ಮುಖ್ಯಮಂತ್ರಿಯೊಬ್ಬರಿಗೇ ಈ ರೀತಿಯಾದರೆ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕಾನೂನು ವ್ಯವಸ್ಥೆಯನ್ನು ನಿಯಂತ್ರಿಸಬೇಕಾದ ನಮ್ಮ ಪೊಲೀಸ್ ಹಾಗೂ ಜಿಲ್ಲಾಡಳಿತವೂ ಆರೆಸ್ಸೆಸ್‌ಗೆ ಹೆದರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದಾಗ ‘ನಮ್ಮಿಂದ ಸಂಘಪರಿವಾರವನ್ನು ನಿಯಂತ್ರಿಸಲು ಸಾಧ್ಯವಿಲ್ಲ’ ಎಂದು ತಮ್ಮ ಪರಿಸ್ಥಿತಿಯನ್ನು ಹೇಳಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಆರೆಸ್ಸೆಸ್ ಕರಾವಳಿ ಪ್ರದೇಶವನ್ನು ನಿಯಂತ್ರಿಸುತ್ತದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಚಿಂತಿಸಬೇಕು ಎಂದು ಅವರು ಹೇಳಿದರು.

ಒಂದು ರಾಜ್ಯದ ಮುಖ್ಯಮಂತ್ರಿಯೊಬ್ಬರಿಗೆ ಭದ್ರತೆ ಕೊಡಲಾಗದಷ್ಟು ನಮ್ಮ ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದರೆ, ಅದು ಅತ್ಯಂತ ಆತಂಕಕಾರಿಯಾದ ವಿಚಾರವಾಗಿದೆ. ಈ ವ್ಯವಸ್ಥೆಗೆ ಕಾರಣರಾದ ಸಂಘಪರಿವಾರದ ಕಾನೂನುಬಾಹಿರ ಚಟುವಟಿಕೆಯನ್ನು ಈಗಲೇ ಸರಿಪಡಿಸದೆ ಹೋದರೆ ಮುಂದಿನ ದಿನಗಳಲ್ಲಿ ಗಂಭೀರವಾದ ಪರಿಣಾಮವನ್ನು ಎದುರಿಸಬೇಕಾಗುತ್ತದೆ.

-ಎಚ್.ಡಿ.ದೇವೇಗೌಡ ಮಾಜಿ ಪ್ರಧಾನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News