ಉತ್ತರ ಪ್ರದೇಶದಲ್ಲಿ ಹಿಂದುತ್ವ ಅಸ್ತ್ರದಿಂದ ಬಿಜೆಪಿಗೆ ಗೆಲುವು: ಸಿಎಂ ಸಿದ್ದರಾಮಯ್ಯ

Update: 2017-03-11 07:07 GMT

ಬೆಂಗಳೂರು, ಮಾ.11: ಉತ್ತರ ಪ್ರದೇಶದಲ್ಲಿ ಬಿಜೆಪಿ ಹಿಂದುತ್ವ ಅಸ್ತ್ರ ಪ್ರಯೋಗ ಮಾಡಿ ಗೆಲುವು ಸಾಧಿಸಿದೆಯೇ ಹೊರತು, ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಿಂದ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸ್ಮಶಾನ ಮತ್ತಿತರ ಭಾವನಾತ್ಮಕ ವಿಚಾರಗಳನ್ನು ಪ್ರಚಾರ ಮಾಡಿ ಬಿಜೆಪಿ ಅಲ್ಲಿ ಗೆದ್ದಿದೆ ಎಂದು ತಿಳಿಸಿದರು. 

ಉತ್ತರ ಪ್ರದೇಶದಲ್ಲಿ ಮೋದಿ ಅಲೆ ಬಿಜೆಪಿ ಗೆಲುವಿಗೆ ಕಾರಣ ಎನ್ನುವುದಾದರೆ ಪಂಜಾಬ್, ಗೋವಾದಲ್ಲಿ  ಏಕೆ ಆ ಅಲೆ ಕೆಲಸ ಮಾಡಲಿಲ್ಲ ಎಂದು ಸಿಎಂ ಪ್ರಶ್ನಿಸಿದರು. 

ಸಣ್ಣ, ದೊಡ್ಡ ರಾಜ್ಯಗಳ ವಿಷಯ ಅಲ್ಲ. ಪಂಜಾಬ್, ಗೋವಾದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯವರು ಈಗ ಏಕೆ ಅಲ್ಲಿ ಗೆಲ್ಲಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ. ಜನ ಕೊಟ್ಟಿರುವ ತೀರ್ಪು ಒಪ್ಪಬೇಕಾಗುತ್ತದೆ ಎಂದರು. 

ಮೋದಿ ಅವರು ಪಂಬಾಬ್‍ನಲ್ಲಿ ಸಾಕಷ್ಟು ಚುನಾವಣಾ ರ‍್ಯಾಲಿಗಳನ್ನು ನಡೆಸಿದ್ದರು. ಸಚಿವ ರಮೇಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ನಡೆದ ಐಟಿ ದಾಳಿ ವಿಚಾರವನ್ನೂ ಅಲ್ಲಿ ಪದೇ ಪದೇ ಪ್ರಸ್ತಾಪಿಸಿದ್ದರು. ಆದರೂ ಅಲ್ಲಿ ಮೋದಿ ಅಲೆಯಿಂದ ಕೆಲಸವಾಗಲಿಲ್ಲ. ಹಾಗಾದರೆ ಅಲೆ ಕೇವಲ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವೇ ? ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಅಖಿಲೇಶ ಯಾದವ್ ಅವರು ಐದು ವರ್ಷ ಉತ್ತಮವಾಗಿ ಆಡಳಿತ ನಡೆಸಿದ್ದರು. ಆದರೂ ಆಡಳಿತ ವಿರೋಧಿ ಅಲೆ, ಮುಲಾಯಂಸಿಂಗ್ ಯಾದವ್ ಕುಟುಂಬದ ಜಗಳ, ಮತಗಳ ಧ್ರುವೀಕರಣ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಹಿಂದುತ್ವ  ಅಸ್ತ್ರವನ್ನು ಪ್ರಬಲವಾಗಿ ಪ್ರಯೋಗಿಸಿದ್ದರ ಪರಿಣಾಮ ಎಸ್ಪಿ-ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಸೋಲಾಗಿದೆ ಎಂದು ಮುಖ್ಯಮಂತ್ರಿಯವರು ವಿಶ್ಲೇಷಿಸಿದರು. 

ಪಂಜಾಬ್‍ನಲ್ಲೂ ಬಿಜೆಪಿ ಹಿಂದುತ್ವ ಹೆಸರಲ್ಲಿ ಮತಗಳಿಸುವ ಪ್ರಯತ್ನ ನಡೆಸಿತು. ಆದರೆ ಅವರು ಪ್ರಯತ್ನ ಫಲ ನೀಡಲಿಲ್ಲ ಎಂದರು. 
ರಾಜ್ಯದಲ್ಲೂ ಆಡಳಿತ ವಿರೋಧಿ ಅಲೆ ಇದೆ ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ತಳ್ಳಿ ಹಾಕಿದ ಮುಖ್ಯಮಂತ್ರಿಯವರು, ಆ ರೀತಿ ಇರಲು ಸಾಧ್ಯವಿಲ್ಲ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯವರು ಮಾಡಿದ ಪಾಪದ ಕೆಲಸವನ್ನು ರಾಜ್ಯದ ಜನ ಇನ್ನೂ ಮರೆತಿಲ್ಲ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News