ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ದಾಖಲಾಗಿದ್ದ ಅಕ್ರಮ ಗಣಿಗಾರಿಕೆ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್

Update: 2017-03-13 15:38 GMT

 ಬೆಂಗಳೂರು, ಮಾ.13: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಜನಾರ್ಧನರೆಡ್ಡಿ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ದೂರನ್ನು ಹೈಕೋರ್ಟ್ ವಿಭಾಗೀಯ ಪೀಠ ರದ್ದುಗೊಳಿಸಿ ಆದೇಶಿಸಿದೆ.

 ಈ ಸಂಬಂಧ ಓಬಳಾಪುರಂ ಮೈನಿಂಗ್ ಕಂಪೆನಿ ಪ್ರೈ.ಲಿ. ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಎಸ್.ಕೆ.ಮುಖರ್ಜಿ ಹಾಗೂ ನ್ಯಾ.ಆರ್.ಬಿ.ಬೂದಿಹಾಳ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.

 ಅರ್ಜಿದಾರರ ಪರ ವಾದಿಸಿದ ವಕೀಲ ಎನ್.ಲಕ್ಷ್ಮೀನಾರಾಯಣ ಅವರು, ಜಾರಿ ನಿರ್ದೇಶನಾಲಯದವರು ಪಿಎಂಎಲ್‌ಎ ತಿದ್ದುಪಡಿ ಕಾಯ್ದೆ-2009ರ ಅನ್ವಯ ಓಬಳಾಪುರಂ ಮೈನಿಂಗ್ ಕಂಪೆನಿ ವಿರುದ್ಧ ದೂರನ್ನು ದಾಖಲಿಸದೆ, ಪೂರ್ವಾನ್ವಯ ಪಿಎಂಎಲ್‌ಎ ಕಾಯ್ದೆಯ ಅನುಸಾರ ದೂರನ್ನು ದಾಖಲಿಸಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

  ಇಡಿ ಅವರು ಪೂರ್ವಾನ್ವಯ ಪಿಎಂಎಲ್‌ಎ ಕಾಯ್ದೆ ಅನುಸಾರವಾಗಿ ಮಾಜಿ ಸಚಿವ ಜನಾರ್ದನರೆಡ್ಡಿ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ, ಅಧಿಕಾರಿಗಳನ್ನು ದುರುಪಯೋಗ ಮಾಡಿಕೊಂಡಿರುವ ಆರೋಪ, ನಕಲಿ ದಾಖಲೆ ಸೃಷ್ಟಿ ಆರೋಪ ಸೇರಿ ಇತರೆ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಜನಾರ್ದನರೆಡ್ಡಿ ಅವರ 900 ಕೋಟಿ ರೂ.ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಆದರೆ, ಈ ಕಾಯ್ದೆ ಅಡಿಯಲ್ಲಿ ಅವರ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಲು ಬರುವುದಿಲ್ಲ ಎಂದು ಪೀಠಕ್ಕೆ ತಿಳಿಸಿದರು.

  ರೆಡ್ಡಿ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೂ ಹಾಗೂ ದೋಷಾರೋಪ ಪಟ್ಟಿ ಸಲ್ಲಿಕೆಗೂ ಯಾವುದೇ ಹೊಂದಾಣಿಕೆ ಆಗುತ್ತಿಲ್ಲ. ಹೀಗಾಗಿ, ಇಡಿ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

  ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ವಿಭಾಗೀಯ ಪೀಠ ಇಡಿ ಅವರು ರೆಡ್ಡಿ ವಿರುದ್ಧ ಪಿಎಂಎಲ್‌ಎ ತಿದ್ದುಪಡಿ ಕಾಯ್ದೆ-2009ರ ಅನ್ವಯ ದೂರನ್ನು ದಾಖಲಿಸದೆ, ಪೂರ್ವಾನ್ವಯ ಕಾಯ್ದೆ ಅನ್ವಯ ದೂರನ್ನು ದಾಖಲಿಸಿದ್ದಾರೆ ಎಂದು ಅಭಿಪ್ರಾಯಿಸಿ ಇಡಿ ದಾಖಲಿಸಿರುವ ದೂರನ್ನು ರದ್ದುಗೊಳಿಸಿ ಆದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News