ಕಪ್ಪದ ‘ಡೈರಿ’ ಪ್ರಕರಣ: ಧರಣಿ ಕೈಬಿಟ್ಟ ಬಿಜೆಪಿ

Update: 2017-03-20 13:54 GMT

ಬೆಂಗಳೂರು, ಮಾ. 20: ಹೈಕಮಾಂಡ್‌ಗೆ ‘ಕಪ್ಪ’ ಸಲ್ಲಿಸಿದ ಉಲ್ಲೇಖವಿದೆ ಎನ್ನಲಾದ ‘ಡೈರಿ’ ಪ್ರಕರಣ ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದು ಪಟ್ಟು ಹಿಡಿದಿದ್ದ ಬಿಜೆಪಿ, ವಿಧಾನಸಭೆ ಕಲಾಪದಲ್ಲಿ ಕೈಗೊಂಡಿದ್ದ ಧರಣಿ ಸತ್ಯಾಗ್ರಹವನ್ನು ಕೈಬಿಟ್ಟಿದೆ.

ಸೋಮವಾರ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಗುರುವಾರ, ಶುಕ್ರವಾರ ಕೈಗೊಂಡಿದ್ದ ತಮ್ಮ ಧರಣಿ ಸತ್ಯಾಗ್ರಹ ಮುಂದುವರಿಸಿದ ಬಿಜೆಪಿ ಸದಸ್ಯರು, ಕಪ್ಪದ ಡೈರಿ ಪ್ರಕರಣದ ಬಗ್ಗೆ ಚರ್ಚೆಗೆ ತಮ್ಮ ಪಟ್ಟು ಮುಂದುವರಿಸಿದರು.

ಈ ಹಂತದಲ್ಲಿ ಎದ್ದು ನಿಂತ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಹೈಕಮಾಂಡ್‌ಗೆ ಕಪ್ಪ ಸಲ್ಲಿಸಿರುವ ಉಲ್ಲೇಖವಿದೆ ಎನ್ನಲಾದ ಡೈರಿ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ಕಲ್ಪಿಸಬೇಕು. ಸ್ಪೀಕರ್ ಮೊದಲಿಗೆ ಅವಕಾಶ ಕಲ್ಪಿಸಿ, ಆ ಬಳಿಕ ಸರಕಾರದ ಒತ್ತಡಕ್ಕೆ ಮಣಿದು ಚರ್ಚೆಗೆ ಅವಕಾಶ ನಿರಾಕರಿಸಿರುವುದು ಸರಿಯಲ್ಲ ಎಂದರು.

ವಾಗ್ಯುದ್ಧ: ವಿಪಕ್ಷ ನಾಯಕರ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಸದಸ್ಯರಿಗೆ ರಾಜ್ಯದಲ್ಲಿನ ಬರ ಸ್ಥಿತಿಯ ಬಗ್ಗೆ ಚರ್ಚಿಸುವ ಮನಸ್ಸಿಲ್ಲ, ಜನರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಇವರು ಸಿದ್ಧರಿಲ್ಲ. ಹೀಗಾಗಿ ಸುಳ್ಳು ಡೈರಿ ಪ್ರಕರಣವನ್ನು ಮುಂದಿಟ್ಟುಕೊಂಡು ಜನತೆಯನ್ನು ದಾರಿ ತಪ್ಪಿಸುತ್ತಿದ್ದಾರೆಂದು ಟೀಕಿಸಿದರು.

ಬಿಜೆಪಿ ಆಡಳಿತಾವಧಿಯಲ್ಲಿ ಕೋಟಿ ಕೋಟಿ ರೂ. ಲೂಟಿ ಮಾಡಿದ್ದು, ಜೈಲಿಗೆ ಹೋಗಿಬಂದಿದ್ದಾರೆ. ಬಿಜೆಪಿಯವರೇ ಲೂಟಿಕೋರರು ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಇದೀಗ ರಾಜಕೀಯ ಲಾಭಕ್ಕಾಗಿ ಜನರ ಸಮಸ್ಯೆಗಳನ್ನು ಬಿಟ್ಟು ಡೈರಿ ಕತೆ ಆರಂಭ ಮಾಡಿಕೊಂಡಿದ್ದಾರೆಂದು ತರಾಟೆಗೆ ತೆಗೆದುಕೊಂಡರು.

ಜಟಾಪಟಿ: ‘ನೀವು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಿಮ್ಮ ಕುಟುಂಬದ ಸದಸ್ಯರು ಲೂಟಿ ಮಾಡಿದ್ದಾರೆಂದು ಯಡಿಯೂರಪ್ಪ ಆರೋಪ ಮಾಡಿದ್ದಾರೆ. ನಿಮ್ಮ ಪಕ್ಷದವರೇ ಆರೋಪ ಮಾಡಿರುವ ವೇಳೆ ನಾವೇನು ಹೇಳಲಿಕ್ಕೆ ಸಾಧ್ಯ ಎಂದು ಸಿದ್ದರಾಮಯ್ಯ, ವಿಪಕ್ಷ ನಾಯಕ ಶೆಟ್ಟರ್ ಅವರನ್ನು ಪ್ರಶ್ನಿಸಿದರು.

ಬಿಜೆಪಿಯವರಿಂದ ನಾವು ಪಾಠ ಕಲಿಯಬೇಕಿಲ್ಲ. ನಾವು ಜನಪರವಾಗಿ ಕೆಲಸ ಮಾಡುತ್ತಿದ್ದು, ಮುಂದೆಯೂ ಆ ಕಾರ್ಯ ಮುಂದುವರೆಸುತ್ತೇವೆ. ಆದರೆ, ಬಿಜೆಪಿಯವರ ಎಲೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಮತ್ತೊಬ್ಬರ ಎಲೆಯಲ್ಲಿ ಬಿದ್ದ ನೊಣದ ವಿಚಾರದ ಬಗ್ಗೆ ಗದ್ದಲ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

ಇದರಿಂದ ಆಡಳಿತ-ವಿಪಕ್ಷ ಸದಸ್ಯರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಯಿತು. ಅಲ್ಲದೆ, ಏರು ಧ್ವನಿಯಲ್ಲಿ ಮಾತಿನ ಚಕಮಕಿ, ವಾಗ್ಯುದ್ಧವೇ ನಡೆಯಿತು. ಈ ಮಧ್ಯೆಯೇ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಬರ ಪರಿಸ್ಥಿತಿಯ ಬಗ್ಗೆ ನಾವು ಸಿದ್ಧರಿದ್ದೇವೆ. ಹೈಕಮಾಂಡ್‌ಗೆ ಕಪ್ಪ ಸಲ್ಲಿಸಿದ ಸಂಬಂಧ ಡೈರಿಯ ಬಗ್ಗೆ ರಾಜ್ಯದ ಜನತೆಗೆ ಸಂಶಯಗಳಿದ್ದು, ಈ ಬಗ್ಗೆಯೂ ಚರ್ಚೆ ಆಗಬೇಕೆಂದು ಎಂದರು.

ಬರ ಸ್ಥಿತಿಯ ಬಗ್ಗೆ ಚರ್ಚೆ ಮಾಡಬೇಕೆಂಬುದು ಹೌದು. ಆದರೆ, ಆಡಳಿತ ಪಕ್ಷದ ತಪ್ಪುಗಳನ್ನು ಹೇಳಬಾರದೆ ಎಂದು ಪ್ರಶ್ನಿಸಿದ ಜಗದೀಶ್ ಶೆಟ್ಟರ್, ಡೈರಿ ಪ್ರಕರಣವನ್ನು ರಾಜ್ಯದ ಜನತೆ ಮುಂದೆ ಕೊಂಡೊಯ್ಯುತ್ತೇವೆ. ಅಧಿವೇಶನದಲ್ಲಿ ಕೈಗೊಂಡಿದ್ದ ಧರಣಿ ಸತ್ಯಾಗ್ರಹವನ್ನು ಕೈಬಿಡುತ್ತೇವೆಂದು ಪ್ರಕಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News