‘ಸದ್ದಾಂ ಹುಸೈನ್’ ನಿಂದಾಗಿ ಈತ 40 ಬಾರಿ ಉದ್ಯೋಗ ಸಂದರ್ಶನದಲ್ಲಿ ಫೇಲ್!

Update: 2017-03-20 18:51 GMT

ರಾಂಚಿ, ಮಾ.20: ಈ ಯುವಕನ ಹೆಸರು ಸದ್ದಾಂ ಹುಸೈನ್. ಈ ಹೆಸರನ್ನು ಆತನಿಗೆ ಪ್ರೀತಿಯಿಂದ ಇಟ್ಟವರು ಆತನ ಅಜ್ಜ. ಆದರೆ 25 ವರ್ಷಗಳ ನಂತರ ಜಾರ್ಖಂಡ್ ಮೂಲದ ಈ ಯುವಕ ಇದೀಗ ತನ್ನ ಹೆಸರು ಬದಲಾಯಿಸಿದ್ದಾರೆ. ತಮಿಳುನಾಡಿನ ನೂರುಲ್ ಇಸ್ಲಾಮ್ ವಿಶ್ವವಿದ್ಯಾಲಯದಿಂದ ಮರೈನ್ ಇಂಜಿನಿಯರ್ ಆಗಿರುವ ಸದ್ದಾಂ ಅವರು ತಮ್ಮ ಹೆಸರಿನಿಂದಾಗಿಯೇ ಉದ್ಯೋಗವೊಂದನ್ನು ಪಡೆಯಲು ವಿಫಲರಾಗಿದ್ದಾರೆ. ಕಾರಣ ಅವರು 2006ರಲ್ಲಿ ಮರಣದಂಡನೆಗೊಳಗಾದ ಇರಾಕ್ ದೇಶದ ಸರ್ವಾಧಿಕಾರಿ ಆಡಳಿತಗಾರನ ಹೆಸರನ್ನು ಹೊಂದಿದ್ದಾರೆ.

‘‘ಜನರು ನನ್ನನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳಲು ಹೆದರುತ್ತಾರೆ’’ ಎನ್ನುತ್ತಾರೆ ಸದ್ದಾಂ. ಅವರು ಉದ್ಯೋಗಕ್ಕಾಗಿ ಇಲ್ಲಿಯ ತನಕ ಸಲ್ಲಿಸಿದ್ದ 40ಕ್ಕೂ ಅಧಿಕ ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ಹಲವಾರು ಸಂದರ್ಶನಗಳಲ್ಲಿ ಭಾಗವಹಿಸಿದ್ದರೂ ಹಲವಾರು ಬಹುರಾಷ್ಟ್ರೀಯ ಕಂಪೆನಿಗಳು ಅವರನ್ನು ಉದ್ಯೋಗಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿವೆ. ಇಂಜಿನಿಯರಿಂಗ್‌ನಲ್ಲಿ ತಮ್ಮ ಬ್ಯಾಚಿನಲ್ಲಿ ಎರಡನೆ ರ್ಯಾಂಕ್ ಪಡೆದಿರುವ ಹೊರತಾಗಿಯೂ ಸದ್ದಾಂ ಅವರು ಉದ್ಯೋಗ ಪಡೆಯಲು ವಿಫಲವಾಗಿರುವುದು ವಿಪರ್ಯಾಸವೇ ಸರಿ.

ಈ ಕಷ್ಟದಿಂದ ಮುಕ್ತಿ ಪಡೆಯುವ ಸಲುವಾಗಿ ಅವರು ಕಾನೂನುಬದ್ಧವಾಗಿ ತಮ್ಮ ಹೆಸರನ್ನು ಸಾಜಿದ್ ಎಂದು ಬದಲಾಯಿಸಿಕೊಂಡಿದ್ದಾರೆ ಹಾಗೂ ತಮ್ಮ ಪಾಸ್‌ಪೋರ್ಟ್, ಮತದಾರರ ಗುರುತು ಚೀಟಿ ಹಾಗೂ ಡ್ರೈವಿಂಗ್ ಲೈಸನ್ಸಿನಲ್ಲೂ ತಮ್ಮ ಹೆಸರು ಬದಲಾಯಿಸಿಕೊಂಡಿದ್ದಾರೆ. ಆದರೂ ಅವರು ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಅವರ 10ನೆ ಹಾಗೂ 12ನೆ ತರಗತಿ ಪ್ರಮಾಣ ಪತ್ರಗಳಲ್ಲಿ ಅವರ ಹಿಂದಿನ ಹೆಸರೇ ಇದೆ. ಸಿಬಿಎಸ್‌ಇ ಅದನ್ನು ಬದಲಾಯಿಸಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಅವರೀಗ ಜಾರ್ಖಂಡ್ ಹೈಕೋರ್ಟ್‌ನ ಮೆಟ್ಟಿಲು ಹತ್ತಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಮೇ 5ಕ್ಕೆ ನಿಗದಿ ಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News