ವಿಮಾನದಲ್ಲಿ ಇಲೆಕ್ಟ್ರಾನಿಕ್ ಸಾಧನಗಳನ್ನು ಒಯ್ಯಲು ಅಮೆರಿಕ ನಿಷೇಧ?

Update: 2017-03-21 13:36 GMT

ವಾಶಿಂಗ್ಟನ್, ಮಾ. 21: ಅಮೆರಿಕಕ್ಕೆ ತೆರಳುವ ನಿರ್ದಿಷ್ಟ ವಿದೇಶಿ ಏರ್‌ಲೈನ್ ವಿಮಾನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ದೊಡ್ಡ ಇಲೆಕ್ಟ್ರಾನಿಕ್ ವಸ್ತುಗಳನ್ನು ಕ್ಯಾಬಿನ್ ಒಳಗೆ ತರುವುದನ್ನು ನಿಷೇಧಿಸುವ ಬಗ್ಗೆ ಅಮೆರಿಕದ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ಸೋಮವಾರ ತಿಳಿಸಿದರು.

ಭಯೋತ್ಪಾದಕ ದಾಳಿಯ ಬೆದರಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.ಬೆದರಿಕೆ ಬಗ್ಗೆ ಕೆಲವು ವಾರಗಳ ಹಿಂದೆ ಮಾಹಿತಿ ಲಭಿಸಿದಂದಿನಿಂದ ಸರಕಾರ ಈ ಬಗ್ಗೆ ಪರಿಶೀಲನೆ ನಡೆಸುತ್ತಿತ್ತು.

ಮಧ್ಯಪ್ರಾಚ್ಯದ ಕೆಲವು ದೇಶಗಳು ಸೇರಿದಂತೆ ಸುಮಾರು 12 ದೇಶಗಳಿಂದ ಹೊರಡುವ ಸುಮಾರು 12 ವಿದೇಶಿ ವಿಮಾನಯಾನ ಕಂಪೆನಿಗಳಿಗೆ ನೂತನ ನಿಯಮ ಅನ್ವಯಿಸುತ್ತದೆ ಎಂದು ಮೂಲವೊಂದು ತಿಳಿಸಿದೆ.

ಜೋರ್ಡಾನ್ ಮತ್ತು ಸೌದಿ ಅರೇಬಿಯದ ವಿಮಾನಗಳಿಗೂ ಇದು ಅನ್ವಯಿಸುತ್ತದೆ ಎಂದಿದೆ. ಆದರೆ, ಇತರ ದೇಶಗಳ ಹೆಸರನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಸೆಲ್ ಫೋನ್‌ಗಿಂತ ಡೊಡ್ಡದಾದ ಸಲಕರಣೆಗಳನ್ನು ವಿಮಾನದಲ್ಲಿ ನಿಷೇಧಿಸುವ ನಿಯಮ ಅಮೆರಿಕದ ಯಾವುದೇ ವಿಮಾನಯಾನ ಸಂಸ್ಥೆಗಳಿಗೆ ಅನ್ವಯಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಟ್ಯಾಬ್ಲೆಟ್, ಲ್ಯಾಪ್‌ಟಾಪ್ ಮತ್ತು ಕ್ಯಾಮರ ಮುಂತಾದ ಸಾಧನಗಳನ್ನು ತಪಾಸಣೆಗೊಳಪಡಿಸಿದ ಚೀಲಗಳಲ್ಲಿ ಒಯ್ಯಲು ಪ್ರಯಾಣಿಕರಿಗೆ ಅನುಮತಿ ನೀಡಲಾಗುವುದು.

ಜೋರ್ಡಾನ್ ವಿಮಾನ ಸಂಸ್ಥೆಯಿಂದ ಸೂಚನೆ

ಅಮೆರಿಕದ ಅಧಿಕಾರಿಗಳ ಮನವಿಯಂತೆ, ಮಂಗಳವಾರದಿಂದ ಅಮೆರಿಕಕ್ಕೆ ತೆರಳುವ ಪ್ರಯಾಣಿಕರಿಗೆ ವಿಮಾನದಲ್ಲಿ ಹೆಚ್ಚಿನ ಇಲೆಕ್ಟ್ರಾನಿಕ್ ಸಾಧನಗಳನ್ನು ಒಯ್ಯಲು ಅವಕಾಶವಿರುವುದಿಲ್ಲ ಎಂದು ‘ರೋಯಲ್ ಜೋರ್ಡಾನಿಯನ್ ಏರ್‌ಲೈನ್ಸ್’ ಸೋಮವಾರ ಟ್ವೀಟ್ ಮಾಡಿದೆ.

ಆದಾಗ್ಯೂ, ಪ್ರಯಾಣಿಕರು ಸೆಲ್ ಫೋನ್‌ಗಳು ಮತ್ತು ಅನುಮೋದಿತ ವೈದ್ಯಕೀಯ ಸಲಕರಣೆಗಳನ್ನು ತಮ್ಮಂದಿಗೆ ಒಯ್ಯಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News