ಕಾವೇರಿ-ಮಹಾದಾಯಿ ಹೋರಾಟ ಪ್ರಕರಣ: ಹೋರಾಟಗಾರರ ಮೇಲಿನ ಎಲ್ಲ ಪ್ರಕರಣಗಳು ವಾಪಸ್: ಡಾ.ಜಿ.ಪರಮೇಶ್ವರ್

Update: 2017-03-23 14:10 GMT

ಬೆಂಗಳೂರು, ಮಾ.23: ಕಾವೇರಿ ಹಾಗೂ ಮಹಾದಾಯಿ ಹೋರಾಟದಲ್ಲಿ ಭಾಗಿಯಾದ ರೈತರ ಮೇಲೆ ಹೂಡಲಾಗಿದ್ದು ಎಲ್ಲ ಪ್ರಕರಣಗಳನ್ನು ಹಿಂಪಡೆಯಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಗುರುವಾರ ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಎಂ.ನಾರಾಯಣ ಸ್ವಾಮಿಯ ಪ್ರಶ್ನೆಗೆ ಉತ್ತರಿಸಿದ ಅವರು, ಕಾವೇರಿ ನ್ಯಾಯ ಮಂಡಳಿಯ ತೀರ್ಪು ರಾಜ್ಯದ ವಿರುದ್ಧ ಬಂದಿದ್ದರಿಂದ ಬೆಂಗಳೂರು, ಮೈಸೂರು, ರಾಮನಗರದಲ್ಲಿ ಹೋರಾಟಗಾರರು ಪ್ರತಿಭಟನೆ ಮಾಡಿದ್ದರು. ಈ ಸಂಬಂಧ 26 ಪ್ರಕರಣಗಳನ್ನು ದಾಖಲಿಸಿದ್ದೆವು. ಹೋರಾಟಗಾರರ ಭವಿಷ್ಯದ ಹಿತದೃಷ್ಟಿಯಿಂದ ಪ್ರಕರಣಗಳನ್ನು ಹಿಂಪಡೆಯಲಾಗಿದೆ ಎಂದು ತಿಳಿಸಿದರು.

ಇದೇ ರೀತಿಯಲ್ಲಿ ಮಹಾದಾಯಿ ನ್ಯಾಯಮಂಡಳಿಯು ರಾಜ್ಯ ವಿರುದ್ಧವೇ ತೀರ್ಪು ನೀಡಿತ್ತು. ಈ ತೀರ್ಪನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಹೋರಾಟಗಾರರು 9 ಸರಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ಸಂಬಂಧ 81 ಪ್ರಕರಣಗಳನ್ನು ದಾಖಲಾಗಿತ್ತು. ಇದರಲ್ಲಿ 51ಪ್ರಕರಣಗಳನ್ನು ಹಿಂಪಡೆಯಲಾಗಿದೆ. ಉಳಿದ ಪ್ರಕರಣಗಳನ್ನು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ವಾಪಸ್ ಪಡೆಯಲಾಗುವುದು ಎಂದು ಅವರು ಹೇಳಿದರು.

ಮುಂಭಡ್ತಿಗೆ ಆರು ತಿಂಗಳ ತಡೆಗೆ ಆದೇಶ

ಬೆಂಗಳೂರು, ಮಾ. 23: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೌಕರರಿಗೆ ಭಡ್ತಿಯಲ್ಲಿ ಮೀಸಲಾತಿ ಕಲ್ಪಿಸಿ ರಾಜ್ಯ ಸರಕಾರ 2002ರಲ್ಲಿ ಜಾರಿಗೆ ತಂದಿದ್ದ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿರುವುದರಿಂದ ಮುಂದಿನ ಆರು ತಿಂಗಳ ಅವಧಿಗೆ ಎಲ್ಲ ವೃಂದಗಳ ಮುಂಭಡ್ತಿ ಪ್ರಕ್ರಿಯೆ ತಡೆಹಿಡಿಯಲು ಆದೇಶ ಹೊರಡಿಸಿದೆ.

ಮೂರು ತಿಂಗಳ ಒಳಗೆ ಜೇಷ್ಠತಾ ಪಟ್ಟಿ ಪರಿಷ್ಕರಿಸುವಂತೆಯೂ ಸುಪ್ರೀಂ ಕೋರ್ಟ್ ಫೆ.9ರಂದು ನೀಡಿದ ಆದೇಶದಲ್ಲಿ ಸೂಚಿಸಿದೆ. ಈ ಆದೇಶ ಮರು ಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಲು ಈಗಾಗಲೇ ರಾಜ್ಯ ಸರಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News