ಎರಡನೆ ಹಂತದ ನಗರಗಳಲ್ಲಿ ಐಟಿ ಪಾರ್ಕ್ ಸ್ಥಾಪನೆ: ಸಚಿವ ಪ್ರಿಯಾಂಕ್ ಖರ್ಗೆ

Update: 2017-03-23 14:14 GMT

ಬೆಂಗಳೂರು,ಮಾ. 23: ಮಂಗಳೂರು, ಮೈಸೂರು, ಧಾರವಾಡ ಸೇರಿದಂತೆ ರಾಜ್ಯದ ಎರಡನೆ ಹಂತದ ನಗರಗಳಲ್ಲಿ ಐಟಿ ಪಾರ್ಕ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.

ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಆಡಳಿತ ಪಕ್ಷದ ಸದಸ್ಯ ಮೊಯಿದ್ದೀನ್ ಬಾವಾ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಬೆಂಗಳೂರು ಮಾತ್ರವಲ್ಲದೆ ಉಳಿದ ನಗರ ಪ್ರದೇಶಗಳಲ್ಲೂ ಐಟಿ ಪಾರ್ಕ್‌ಗಳನ್ನು ವಿಸ್ತರಿಸಬೇಕು ಎಂಬ ಉದ್ದೇಶವಿದೆ. ಆ ನಿಟ್ಟಿನಲ್ಲಿ 2ನೆ ಹಂತದ ನಗರಗಳನ್ನು ಪರಿಗಣಿಸಲಾಗುವುದು ಎಂದರು.

ಮಾಹಿತಿ ತಂತ್ರಜ್ಞಾನ (ಐಟಿ) ಪಾರ್ಕ್‌ಗಳು ಬೆಂಗಳೂರು ನಗರಕ್ಕೆ ಕೇಂದ್ರಿಕೃತ ಸರಿಯಲ್ಲ. ಎರಡನೆ ಹಂತದ ನಗರಕ್ಕೂ ವಿಸ್ತರಿಸುವುದರಿಂದ ಅನುಕೂಲವಾಗಲಿದೆ. ಅಲ್ಲದೆ, ಅಲ್ಲಿನ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ಎರಡನೆ ಹಂತ ನಗರಗಳ ಜನಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಚರ್ಚಿಸಿ, ಐಟಿ ಪಾರ್ಕ್‌ಗಳ ಸ್ಥಾಪಿಸುವ ಸಂಬಂಧ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದ ಅವರು, ಅಭಿವೃದ್ಧಿ ದೃಷ್ಟಿಯಿಂದ ಎರಡನೆ ಹಂತದ ನಗರಗಳಲ್ಲಿ ಐಟಿ ಪಾರ್ಕ್‌ಗಳು ಸ್ಥಾಪನೆ ಆಗಬೇಕೆಂದು ಆಶಯವನ್ನು ವ್ಯಕ್ತಪಡಿಸಿದರು.

ಆರಂಭಕ್ಕೆ ವಿಷಯ ಪ್ರಸ್ತಾಪಿಸಿದ ಮೊಯಿದ್ದೀನ್ ಬಾವಾ, ಎರಡನೆ ಹಂತದ ನಗರಗಳಲ್ಲಿ ಐಟಿ ಪಾರ್ಕ್ ಸ್ಥಾಪಿಸಿದರೆ ಬಂಡವಾಳ ಹೂಡಿಕೆಯಾಗಲಿದೆ. ಅಲ್ಲದೆ, ಮೂಲ ಸೌಲಭ್ಯ ಅಭಿವೃದ್ದಿಗೂ ಅನುಕೂಲವಾಗಲಿದೆ. ಆದುದರಿಂದ ಸರಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News