×
Ad

ಮಾದಕ ವಸ್ತುಗಳ ಮಾರಾಟ ಜಾಲ ತಡೆಗೆ ವೃತ್ತಿನಿರತ ಕಾಲೇಜುಗಳ ಮೇಲೆ ನಿಗಾ: ಡಾ.ಜಿ.ಪರಮೇಶ್ವರ್

Update: 2017-03-23 20:26 IST

ಬೆಂಗಳುರು, ಮಾ.23: ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಜಾಲದ ಕೇಂದ್ರಗಳಾದ ಕೆಲ ಪ್ರತಿಷ್ಠಿತ ವೃತ್ತಿನಿರತ ಕಾಲೇಜು, ಹಣವಂತರು ಆಯೋಜಿಸುವ ಕಾರ್ಯಕ್ರಮಗಳ ಮೇಲೆ ನಿಗಾ ಇಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಗುರುವಾರ ವಿಧಾನಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಲೆಹರ್ ಸಿಂಗ್ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲ ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಹೊಟೇಲ್‌ಗಳು ಮಾದಕ ವಸ್ತುಗಳ ಕೇಂದ್ರವಾಗಿದೆ. ಹೀಗಾಗಿ ಇವುಗಳ ಮೇಲೆ ನಿಗಾವಹಿಸಿ ಮಾದಕ ವಸ್ತುಗಳ ತಡೆಗಟ್ಟುವಿಕೆಗೆ ಎಲ್ಲ ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಮುದ್ರ, ರಸ್ತೆ ಹಾಗೂ ವಾಯು ಮಾರ್ಗ ಸೇರಿದಂತೆ ವಿವಿಧ ಮಾರ್ಗಗಳ ಮೂಲಕ ಮಾದಕ ವಸ್ತುಗಳು ಸರಬರಾಜಾಗುತ್ತಿದೆ. ಇವುಗಳ ಮೇಲೆ ತೀವ್ರ ನಿಗಾವಹಿಸಿ ದಾಳಿ ಮಾಡಿ ಮಾರಾಟಗಾರರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಲಾಗುತ್ತಿದೆ. ಈ ಸಂಬಂಧ 65 ದೇಶಿಯರು ಮತ್ತು 23 ವಿದೇಶಿಯರನ್ನು ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.

ವಿದೇಶಿ ಬಂಧಿತರಲ್ಲಿ ಅತೀ ಹೆಚ್ಚು ನೈಜೀರಿಯಾದವರೇ ಇದ್ದಾರೆ. ಮಂಗಳೂರು, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ಮೆಡಿಕಲ್, ಇಂಜಿನಿಯರಿಂಗ್, ಎಂಬಿಎ ಕಾಲೇಜುಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲ ರೂಪಿಸಿಕೊಂಡಿರುತ್ತಾರೆ. ಹಾಗಾಗಿ ಪ್ರತಿಯೊಂದು ಠಾಣೆ ಸಿಬ್ಬಂದಿಗೂ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

1023 ಅಕ್ರಮ ವಲಸಿಗರು: 1023 ಮಂದಿ ವೀಸಾ ಮುಗಿದಿರುವ ಅಕ್ರಮ ವಲಸಿಗರು ರಾಜ್ಯದಲ್ಲಿದ್ದಾರೆ. ಇದರಲ್ಲಿ 59 ಜನರನ್ನು ಗಡಿಪಾರು ಮಾಡಲಾಗಿದೆ. ಇತ್ತೀಚೆಗಷ್ಟೇ ವೀಸಾ ಅವಧಿ ಮುಗಿದು ಡ್ರಗ್ ಮಾರಾಟ ಮಾಡುತ್ತಿದ್ದ ನೈಜೀರಿಯನ್ ಪ್ರಜೆಯೊಬ್ಬನನ್ನು ನಗರದಲ್ಲಿ ಬಂಧಿಸಲು ಹೋದಾಗ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ. ನೈಜೀರಿಯಾ ರಾಯಭಾರಿ ಕಚೇರಿಗೆ ಮಾಹಿತಿ ನೀಡಿದರೂ ಈವರೆಗೆ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮೃತದೇಹದ ವಾರಸುದಾರರು ಬಾರದ್ದರಿಂದ ಮೃತದೇಹವನ್ನು ಆಸ್ಪತ್ರೆಯಲ್ಲೇ ಇಡಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News