ಚಳವಳಿಗಳಿಲ್ಲದ ಕಾಲದಲ್ಲಿ-ಎಡ, ಬಲಗಳ ಮಧ್ಯದಲ್ಲಿ

Update: 2017-03-23 18:51 GMT

ಒಬ್ಬ ವ್ಯಕ್ತಿ ‘ಯಾವ ಪಂಥಕ್ಕೂ’ ಸೇರದಿರುವುದೇ ಅತ್ಯುತ್ತಮ ಮಾರ್ಗವೆನ್ನುವುದು ಇಂದು ಕೆಲವರ ಮಟ್ಟಿಗಾದರೂ ಆಕರ್ಷಕ ನಿಲುವಾಗಿದೆ. ‘ಯಾವ ಪಂಥಕ್ಕೂ ಸೇರದಿರುವುದು’ ಎಂದರೇನು? ಮನುಸ್ಮತಿಯೂ ಸರಿ, ಅಂಬೇಡ್ಕರರೂ ಸರಿ ಎಂಬುದು ಸರಿಯಾದ ಮಾತೇ? ನಾನು ಯಾವುದೇ ಮಾರ್ಗಕ್ಕೆ ಕಟ್ಟು ಬೀಳುವವನ/ಳಲ್ಲ ಎಂದರೆ, ಅಂಥ ಮಾತಿನ ಹಿಂದೆ, ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವಲ್ಲಿನ ಸೋಲು ನಿಚ್ಚಳವಾಗುತ್ತದೆಯೇ ಹೊರತು, ಅದೇ ಒಂದು ಉತ್ತಮ ಲಕ್ಷಣವಲ್ಲ.


ಕರ್ನಾಟಕದ ಬೌದ್ಧಿಕ ವಲಯದಲ್ಲಿ ಆಗಾಗ ಎಡ, ಬಲ ಪಂಥಗಳ ಮತ್ತು ಮಧ್ಯಮ ಮಾರ್ಗ- ಇವುಗಳ ಕುರಿತು ಗಂಭೀರ ಚರ್ಚೆ ನಡೆಯುತ್ತಿದೆ. ಅದೇ ಸಂದರ್ಭದಲ್ಲಿಯೇ, ಈಗಿನದು ಚಳವಳಿಗಳೇ ಇಲ್ಲದ ಕಾಲ ಎಂಬ ಮಾತೂ ತೂರಿಕೊಂಡು ಬರುತ್ತಿದೆ. ‘ಬುದ್ಧಿಜೀವಿ’ ವರ್ಗದಲ್ಲಿ ಕೇಳಿ ಬರುವ ಇಂಥ ಮಾತುಗಳು ಮಾರ್ಗದರ್ಶನಕ್ಕಾಗಿ ಅವರ ಕಡೆಗೆ ಆಸೆಗಣ್ಣಿನಿಂದ ನೋಡುವ ಯುವ ಪೀಳಿಗೆಯ ಕೆಲವರ್ಗದಲ್ಲಿ ಸ್ವೀಕೃತವಾದರೆ, ಇತರರಲ್ಲಿ ಗೊಂದಲ ಮೂಡಿಸುತ್ತಿದೆ.

ಈ ಮಾತುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಅವು ಯಾರಿಂದ ಮತ್ತು ಯಾತಕ್ಕಾಗಿ ಹೊರ ಬರುತ್ತಿವೆ ಎಂದು ಗಮನಿಸಿದರೆ ಅವುಗಳನ್ನು ಎಷ್ಟರ ಮಟ್ಟಿಗೆ ಮಾನ್ಯ ಮಾಡಬಹುದು ಎಂಬುದು ಸ್ಪಷ್ಟವಾಗುತ್ತದೆ. ಎಡ ಮತ್ತು ಬಲ- ಈ ಎರಡೂ ಪದಗಳನ್ನು ರಾಜಕೀಯವಾಗಿ ಅರ್ಥೈಸಿಕೊಂಡರೆ ಎಡ ಅಂದರೆ ಕಮ್ಯುನಿಸ್ಟರೆಂದೂ, ಬಲ ಎಂದರೆ ಭಾರತೀಯ ಜನತಾ ಪಕ್ಷದವರೆಂದೂ ಸಾಮಾನ್ಯ ಗ್ರಹಿಕೆಯಾಗಿದೆ. ಇನ್ನು ಮಧ್ಯಮ ಮಾರ್ಗಿಗಳು? ಸದ್ಯಕ್ಕೆ ಕಾಂಗ್ರೆಸ್ ಪಕ್ಷದವರು.

ಆದರೆ, ಈ ಪದಗಳನ್ನು ಪಕ್ಷ ರಾಜಕಾರಣದ ಬಂಧನದಿಂದ ಬಿಡಿಸಿ ನೋಡಿದಾಗ ‘ಎಡ’, ‘ಬಲ’ಗಳು ಹಲವು ಗೊಂದಲಗಳನ್ನು ಮೂಡಿಸಿವೆ. ಹಾಗೆ ನೋಡಿದರೆ, ಈ ಪದಗಳ ಬಳಕೆಯೇ ಇಲ್ಲದೆ ವ್ಯಕ್ತಿಯೊಬ್ಬಳು/ನು ವಿಷಯವನ್ನು ಗ್ರಹಿಸುವ ವಿಧಾನ, ಅವಳ/ನ ನಿಲುವುಗಳು- ಇವುಗಳನ್ನಾಧರಿಸಿ ಆ ವ್ಯಕ್ತಿಯ ಲೋಕ ದೃಷ್ಟಿಯನ್ನು ಅರ್ಥ ಮಾಡಿಕೊಳ್ಳಬಹುದು.

ಭಾರತದ ಜನರ ಇತಿಹಾಸದುದ್ದಕ್ಕೂ, ಇಲ್ಲಿನ ಸಾಮಾಜಿಕ ಶ್ರೇಣಿಯಾಧರಿತ ತಾರತಮ್ಯ ನಮ್ಮನ್ನು ತಟ್ಟದೆ ಇರಲಾರದು. ಈ ಅಂಶವನ್ನು ಪಕ್ಕಕ್ಕೆ ಸರಿಸಿ, ಭವ್ಯ ಭಾರತದ ಇತಿಹಾಸವನ್ನು ಮಾತ್ರ ಹೊಗಳುವವರಿಗೇನೂ ಕೊರತೆ ಇಲ್ಲವೆನ್ನಿ. ಅದೇ ರೀತಿಯಲ್ಲಿ, ಜಗತ್ತಿನ ಯಾವುದೇ ದೇಶದ ಚರಿತ್ರೆಯನ್ನು ಕೆದಕಿದರೂ ಅಲ್ಲಿ ಕಾಣುವುದು, ಭಾರತದಷ್ಟು ಕಠೋರವಾಗಿಯಲ್ಲದಿದ್ದರೂ, ಯಾವುದೋ ಒಂದು ರೀತಿಯ ತಾರತಮ್ಯ, ದೌರ್ಜನ್ಯ, ಶೋಷಣೆ. ತೆಲುಗಿನ ‘ಮಹಾಕವಿ’ ಎಂದೇ ಖ್ಯಾತರಾದ ಶ್ರೀ ಶ್ರೀಯವರ ಮಾತುಗಳಲ್ಲಿ ಹೇಳುವುದಾದರೆ-

‘ಏದೇಶ ಚರಿತ್ರ ಚೂಚಿನಾ, ಏ ಮುನ್ನದಿಗರ್ವಕರಣಂ?
ನರಜಾತಿ ಚರಿತ್ರ ಸಮಸ್ತಂ, ಪರಪೀಡನ ಪರಾಯಣತ್ವ
(ದೇಶ ಯಾವುದಾದರೇನು ಹೆಮ್ಮೆಪಡುವಂಥದೇನು?
ಮನುಕುಲದ ಕಥೆಯೆಲ್ಲೆಡೆ ಪರಪೀಡನೆಯೇ ತುಂಬಿವೆಯೇನು?)

ಭಾರತದಲ್ಲಿಯಂತೂ, ಕ್ರಿಸ್ತಪೂರ್ವದಲ್ಲಿಯೇ ಶೋಷಣೆಭರಿತ ವ್ಯವಸ್ಥೆಗೆ ಧಾರ್ಮಿಕ ಮಾನ್ಯತೆಯೂ ದೊರಕಿ, ಅಂದಿನ (ಅ)ಧರ್ಮ ಶಾಸ್ತ್ರಗಳು ಸೃಷ್ಟಿಸಿದ ಮನೋಧರ್ಮವೇ, ಅವುಗಳಿಗೆ ಕಾನೂನಿನ ಮಾನ್ಯತೆ ಇಲ್ಲದಿರುವ ಈ ಕಾಲದಲ್ಲಿಯೂ, ಮುಂದುವರಿಯುತ್ತಿರುವುದು ವಾಸ್ತವ. ಅದೇ ಸಮಯದಲ್ಲಿ ಇಂಥ ಧೋರಣೆಯನ್ನು ವಿರೋಧಿಸುವ ಮನಸ್ಥಿತಿಗೆ ಕಾರಣ ಲೋಕಾಯತರು, ಬುದ್ಧ, ಬಸವ ಮುಂತಾದವರೂ ಸಹ ಇದೇ ಇತಿಹಾಸದ ಭಾಗವಾಗಿದ್ದಾರೆ. ಪಶ್ಚಿಮದಲ್ಲಿ ಸಾಕ್ರಟಿಸ್, ಸ್ಪಾರ್ಟಕಸ್, ಗೆಲಿಲಿಯೋ, ಗಿಯೋರ್ಡಾನೋ ಬ್ರೂನೋ ಮುಂತಾದವರು ಕಂದಾಚಾರದ, ಕುರುಡು ಯಜಮಾನಿಕೆಯ ವಿರುದ್ಧ ನಿಂತ ನಿದರ್ಶನಗಳು. ಇಂದೂ ಸಹ, ಸಂವಿಧಾನಕ್ಕೆ ಎಲ್ಲರೂ ಬದ್ಧರು ಎಂದು ಹೇಳುತ್ತಲೇ, ಯಜಮಾನ ಸಂಸ್ಕೃತಿಯನ್ನು ಪೋಷಿಸುವವರು ಮತ್ತು ಅಂಥವರನ್ನು ಎದುರಿಸಿ ಸ್ವಾತಂತ್ರ, ಸಮಾನತೆಗಳಿಗಾಗಿ ಹೋರಾಡುತ್ತಾ ಫುಲೆ, ಅಂಬೇಡ್ಕರರ ಪರಂಪರೆಯನ್ನು ಮುಂದುವರಿಸುತ್ತಿರುವವರೂ ಅಲ್ಲಗಳೆಯಲಾಗದ ವಾಸ್ತವ. ಈ ಎರಡೂ ಧ್ರುವಗಳ ನಡುವೆ ನಿಂತು ಯಾವ ನಿಲುವಿಗೂ ಅಂಟಿಕೊಳ್ಳದಿರುವವರೂ ನಮ್ಮ ನಡುವೆಯೇ ಇದ್ದಾರೆ.

ಶೋಷಕ, ಶೋಷಿತ್ವ- ಈ ಎರಡು ಗುಂಪುಗಳಲ್ಲಿ ನಾವು ಯಾರ ಕಡೆ ಎನ್ನುವುದು ಪ್ರಶ್ನೆ. ತಮ್ಮ ಅಸ್ತಿತ್ವದ ಪ್ರಶ್ನೆಯನ್ನೇ ಜೀವನದ ಕ್ಷಣಕ್ಷಣವೂ ಎದುರಿಸುವ ಜನ ಸಾಮಾನ್ಯರೂ ಈ ಅಂಶಕ್ಕೆ ಗಮನ ನೀಡದಿರಬಹುದು. ಆದರೂ ಅಂಥವರೂ ಸಹ ನಿರ್ಣಾಯಕ ಘಟ್ಟದಲ್ಲಿ ಒಂದು ನಿಲುವನ್ನು ತಳೆಯುವುದು ಅನಿವಾರ್ಯವಾಗುತ್ತದೆ. ಇಂದಿನ ಸಮಸ್ಯೆಯೆಂದರೆ, ಸಮಾಜದ ಆಗುಹೋಗುಗಳ ಬಗ್ಗೆ ಸೈದ್ಧಾಂತಿಕ ಚರ್ಚೆಯಲ್ಲಿ ಮುಳುಗಿ, ನಾವು ಯಾವ ಕಡೆಯೂ ಇಲ್ಲ ಎಂದು ಹೇಳುವ ‘ಬುದ್ಧಿ ಜೀವಿ’ ವರ್ಗದ್ದು.

ಒಬ್ಬ ವ್ಯಕ್ತಿ ‘ಯಾವ ಪಂಥಕ್ಕೂ’ ಸೇರದಿರುವುದೇ ಅತ್ಯುತ್ತಮ ಮಾರ್ಗವೆನ್ನುವುದು ಇಂದು ಕೆಲವರ ಮಟ್ಟಿಗಾದರೂ ಆಕರ್ಷಕ ನಿಲುವಾಗಿದೆ. ‘ಯಾವ ಪಂಥಕ್ಕೂ ಸೇರದಿರುವುದು’ ಎಂದರೇನು? ಮನುಸ್ಮತಿಯೂ ಸರಿ, ಅಂಬೇಡ್ಕರರೂ ಸರಿ ಎಂಬುದು ಸರಿಯಾದ ಮಾತೇ? ನಾನು ಯಾವುದೇ ಮಾರ್ಗಕ್ಕೆ ಕಟ್ಟು ಬೀಳುವವನ/ಳಲ್ಲ ಎಂದರೆ, ಅಂಥ ಮಾತಿನ ಹಿಂದೆ, ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳುವಲ್ಲಿನ ಸೋಲು ನಿಚ್ಚಳವಾಗುತ್ತದೆಯೇ ಹೊರತು, ಅದೇ ಒಂದು ಉತ್ತಮ ಲಕ್ಷಣವಲ್ಲ. ಉದಾಹರಣೆಗೆ ಚಿಲ್ಟಿ, ಕೀಲವೇನ್ಮಣಿ, ಚುಂಡೂರು, ಕಂಬಾಲಪಲ್ಲಿ, ಖೈರ್ಲಾಂಜಿ, ಇತ್ತೀಚೆಗೆ ಉನಾ, ದಿಡ್ಡಳ್ಳಿ, ಗುಬ್ಬಿ- ಇಂಥ ಜಾಗಗಳಲ್ಲಿ ವ್ಯವಸ್ಥೆಯ ತುಳಿತಕ್ಕೊಳಗಾದವರ ವಿಷಯದಲ್ಲಿ ‘ನೀವು ಯಾರ ಕಡೆ’ ಎಂದು ಕೇಳಿದಾಗ ‘ನಾನು ತುಳಿತಕ್ಕೊಳಗಾದವರ ಪರ’ ಎಂದರೆ, ಅದು ಒಂದು ಪಂಥವಾಗುವುದೇ? ಅದು ಒಂದು ನಿಲುವು. ಅದನ್ನು ನೀವು ಎಡ ಎಂದು ಬೇಕಾದರೆ ಕರೆಯಿರಿ. ಆದರೆ, ಇಂಥ ಸನ್ನಿವೇಶಗಳಲ್ಲಿಯೂ ‘ನಾನು ಮಧ್ಯಮ ಮಾರ್ಗಿ’ ಎಂದು ಹೇಳುವುದು ಎಡಬಿಡಂಗಿತನವೇ ಆಗುವುದಿಲ್ಲವೇ?

ಹೀಗಾಗಿ, ಇಂದು ಮುಖ್ಯವಾಗಿರುವುದು ‘ಎಡ-ಬಲ’ಗಳೆಂಬ ಪದಗಳ ಜಟಾಪಟಿಯಲ್ಲಿ ಸಮಾಜವನ್ನು ಮುನ್ನಡೆಸುವ ಮತ್ತು ಯಥಾಸ್ಥಿತಿಯನ್ನು ಕಾಪಾಡುವ ಅಥವಾ ಇನ್ನೂ ಹಿಂದಕ್ಕೆ ಎಳೆಯಲು ಯತ್ನಿಸುವ ಮನೋಧರ್ಮವನ್ನು, ಶಕ್ತಿಗಳನ್ನು ಗುರುತಿಸುವುದು; ನವ ಜೀವನಾನುಭವ, ಓದು, ಗ್ರಹಿಕೆಗಳ ಆಧಾರದಲ್ಲಿ ನಾವು ಯಾರ ಜೊತೆಯಲ್ಲಿ ನಿಲ್ಲುತ್ತೇವೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕಾಗಿದೆ.

ಇನ್ನು, ‘ಇದು ಚಳವಳಿಗಳಿಲ್ಲದ ಕಾಲ’ ಎಂಬ ಮಾತು. ಇಪ್ಪತ್ತನೆಯ ಶತಮಾನದಲ್ಲಿ, ಭಾರತದಲ್ಲಿ ಸ್ವಾತಂತ್ರ ಚಳವಳಿಯ ನಂತರ ಎಪ್ಪತ್ತು, ಎಂಬತ್ತರ ದಶಕಗಳು ‘ಚಳವಳಿಗಳ ಅವಧಿ’ ಎಂದು ಹೇಳುವುದು ಸಾಮಾನ್ಯವಾಗಿದೆ. ದಲಿತ, ಮಹಿಳಾ, ರೈತ, ನಕ್ಸಲೀಯ ಹಾಗೂ ವಿದ್ಯಾರ್ಥಿ ಚಳವಳಿಗಳು ಆ ಕಾಲಘಟ್ಟದಲ್ಲಿ ಕಾಣಿಸಿದ್ದಿದೆ. ಆದರೆ, ಇಂದು ಚಳವಳಿಗಳೇ ಇಲ್ಲ ಎಂದರೆ, ಅಂದಿನ ಸಮಸ್ಯೆಗಳೆಲ್ಲವೂ ಬಗೆಹರಿದಿವೆೆ ಎಂದು ಅರ್ಥವೇ? ಜಾಗತೀಕರಣದ ಪರಿಣಾಮವಾಗಿ, ಬಂಡವಾಳಶಾಹಿ ಮನೋಧರ್ಮವೇ ಇಂದಿನ ಯುವಜನತೆಯಲ್ಲಿ ಮನೆ ಮಾಡಿಕೊಂಡು, ಮುಖ್ಯವಾಗಿ ಮಾಧ್ಯಮ ವರ್ಗದ ಯುವಜನತೆ ಸ್ವಕೇಂದ್ರಿತವಾಗಿದ್ದು, ಕೊಳ್ಳುಬಾಕರಾಗಿದ್ದು ವಾಸ್ತವವೇ. ಆದರೆ, ಅದೇ ಜಾಗತೀಕರಣದ ಹೊಡೆತಕ್ಕೆ ಸಿಲುಕಿದವರೂ ದೊಡ್ಡ ಸಂಖ್ಯೆಯಲ್ಲಿಯೇ ಇದ್ದಾರೆ. ಅವರು ಏನೂ ಮಾಡದೆ ಸುಮ್ಮನಿದ್ದಾರೆಂದು ತಿಳಿಯಬೇಕೇ? ಮಹಿಳೆಯರು ವಿಮೋಚನೆಗಾಗಿ, ರೈತರು ತಮ್ಮ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆಗಾಗಿ, ಭೂ, ವಸತಿ ವಂಚಿತರು ತುಂಡು ಭೂಮಿ, ಒಂದು ಸೂರಿಗಾಗಿ, ದಲಿತರು ಸಮಾನತೆಗಾಗಿ ದೇಶದ ವಿವಿಧ ಪ್ರದೇಶಗಳಲ್ಲಿ ನಡೆಸುತ್ತಿರುವ ಹೋರಾಟಗಳನ್ನು ಏನೆಂದು ಕರೆಯಬೇಕು? ಸಮಾಜದ ವಿವಿಧ ಸಮುದಾಯಗಳಿಗೆ ಸೇರಿದ ಈ ಗುಂಪುಗಳು ಒಂದಾಗಿದೆಯಲ್ಲದೆ, ಬಿಡಿ ಬಿಡಿಯಾಗಿಯೇ ತಮ್ಮ ಹೋರಾಟಗಳನ್ನು ಕೈಗೆತ್ತಿಕೊಂಡಿರಬಹುದು.

ಆದರೆ, ಅವರು ಅನ್ಯಾಯದ ವಿರುದ್ಧ ದನಿ ಎತ್ತಿರುವುದು ಸುಳ್ಳಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ, ರಾಮ ಮಂದಿರ ನಿರ್ಮಾಣದ ಸಮಸ್ಯೆಯನ್ನು ಹುಟ್ಟಿಸಿ ದೇಶವೆಲ್ಲ ಸುತ್ತಾಡಿದ ಸಂಘ ಪರಿವಾರದವರೂ ಚಳವಳಿಗಾರರೇ. ಅದನ್ನು ಅಪರಾಧವೆನ್ನುವವರು ಇರುವಂತೆಯೇ, ಅದು ಸರಿಯಾದ ಕ್ರಮವೆನ್ನುವವರೂ ಇದ್ದಾರೆ. ಇಂದು ನಾವು ನಿರ್ಧರಿಸಬೇಕಾಗಿರುವುದು ನಾವು ಯಾವ ಚಳವಳಿಯ ಜೊತೆ ಗುರುತಿಸುಕೊಳ್ಳುತ್ತೇವೆ ಎನ್ನುವುದು. ನಾನು ಯಾರ ಜೊತೆಯೂ ಇಲ್ಲ ಎನ್ನುವುದಾಗಲಿ, ಇಂದು ಯಾವ ಚಳವಳಿಗಳೂ ಇಲ್ಲ ಎನ್ನುವುದಾಗಲಿ ಸಮಕಾಲೀನ ವಾಸ್ತವಗಳನ್ನು ಗುರುತಿಸುವುದರಿಂದ, ಉದ್ದೇಶಪೂರ್ವಕವಾಗಿಯೋ, ಅರಿವಿನ ಕೊರತೆಯಿಂದಾಗಿಯೋ, ದೂರವಿದ್ದಂತೆ.

ಇಂದಿನ ಸಂಘರ್ಷಮಯ ಸನ್ನಿವೇಶದಲ್ಲಿ ಜವಾಬ್ದಾರಿಯುತ ವ್ಯಕ್ತಿಯಾದವಳು/ನು ಒಂದು ಸ್ಪಷ್ಟ ನಿಲುವನ್ನು ತಳೆಯಲೇಬೇಕಾಗಿದೆ. ಅದನ್ನು ‘ಎಡ’ ಅನ್ನಿ, ‘ಬಲ’ ಎನ್ನಿ. ನಾನು ಮಧ್ಯಮ ಮಾರ್ಗಿ, ಯಾವ ಕಡೆಯೂ ಇಲ್ಲ. ಇಂದು ಯಾವ ಚಳವಳಿಯೂ ಇಲ್ಲ ಎಂದರೆ ಅದು ಶುದ್ಧಾಂಗ ‘ಅವಕಾಶವಾದಿ’ತನವೇ ಎನ್ನದೆ ಬೇರೆ ದಾರಿ ಇಲ್ಲ. ನಾವು ಸಮಾಜದ ಬದಲಾವಣೆಯ ಪರವೋ, ಯಥಾಸ್ಥಿತಿ ಅಥವಾ ಹಿನ್ನಡೆಯ ಪರವೋ, ಇಲ್ಲ. ನಡುವಿನಲ್ಲಿ ನಿಂತು ಸಂದರ್ಭಕ್ಕನುಗುಣವಾಗಿ ‘ಛತ್ರಿ’ ಹಿಡಿಯುವ ಅವಕಾಶವಾದಿಗಳೋ ಎನ್ನುವುದನ್ನು ನಮಗೆ ನಾವಾದರೂ ಸ್ಪಷ್ಟಪಡಿಸಿಕೊಳ್ಳಬೇಕಾದ ಕಾಲಘಟ್ಟವಿದು.

Writer - ನಗರಗೆರೆ ರಮೇಶ್

contributor

Editor - ನಗರಗೆರೆ ರಮೇಶ್

contributor

Similar News