ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಡಿ.ಕೆ.ಶಿವಕುಮಾರ್
ಬೆಂಗಳೂರು, ಮಾ. 24: ಪರೀಕ್ಷೆ ಸಂದರ್ಭದಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿದ್ದು, ರಾಜ್ಯದ ಯಾವುದೇ ಭಾಗದಲ್ಲಿಯೂ ವಿದ್ಯುತ್ ಕಡಿತ ಮಾಡಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಣೆ ನೀಡಿದ್ದಾರೆ.
ಶುಕ್ರವಾರ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಅರವಿಂದ ಲಿಂಬಾವಳಿ ಕೇಳಿದ ಪ್ರಶ್ನೆ ಉತ್ತರ ನೀಡಿದ ಅವರು, ನಗರ-ಪಟ್ಟಣ ಪ್ರದೇಶಗಳಲ್ಲಿ 22ರಿಂದ 24 ಗಂಟೆ, ಗ್ರಾಮೀಣ ಪ್ರದೇಶದಲ್ಲಿ ದಿನನಿತ್ಯ 7ಗಂಟೆ 3 ಫೇಸ್ ಹಾಗೂ ಸಂಜೆ 6ರಿಂದ ಬೆಳಗ್ಗೆ 6ಗಂಟೆ ವರೆಗೆ ಸುಮಾರು 10 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದರು.
ಬೇಸಿಗೆ ವೇಳೆಯಲ್ಲಿ ವಿದ್ಯುತ್ ಕೊರತೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ 1 ಸಾವಿರ ಮೆ.ವ್ಯಾ ವಿದ್ಯುತ್ ಖರೀದಿಸಲು ನಿರ್ಧರಿಸಲಾಗಿದೆ. ಕೈಗಾರಿಕೆಗಳಿಗೆ ಬೇಡಿಕೆ ಆಧರಿಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಶಿವಕುಮಾರ್ ಇದೇ ವೇಳೆ ಮಾಹಿತಿ ನೀಡಿದರು.
ಮಹದೇವಪುರ ಕ್ಷೇತ್ರ ಸೇರಿದಂತೆ ಬೆಂಗಳೂರಿನ ಕೆಲವೆಡೆ ತಾಂತ್ರಿಕ ತೊಂದರೆಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ಈ ಬಗ್ಗೆ ಕ್ಷೇತ್ರದಲ್ಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದರು.
ಸೌರ ವಿದ್ಯುತ್ ಘಟಕ : ಸೌರ ವಿದ್ಯುತ್ ಉತ್ಪಾದನೆಗೆ ತಾಲೂಕುವಾರು ವಿದ್ಯುತ್ ಘಟಕ ಸ್ಥಾಪಿಸಲು ಟೆಂಡರ್ ಆಹ್ವಾನಿಸಲಾಗಿದ್ದು, ಒಟ್ಟು 1200 ಮೆ.ವ್ಯಾ ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಲಾಗುವುದು. ಈ ಘಟಕಗಳು ಸೆಪ್ಟಂಬರ್ ಅಂತ್ಯದ ವೇಳೆ ಅನುಷ್ಠಾನಗೊಳ್ಳಲಿವೆ ಎಂದು ಶಿವಕುಮಾರ್, ಆಡಳಿತ ಪಕ್ಷದ ಸದಸ್ಯ ಬಿಆರ್. ಯಾವಗಲ್ ಪ್ರಶ್ನೆಗೆ ಉತ್ತರಿಸಿದರು.
ಸೌರ ವಿದ್ಯುತ್ ಪ್ರತಿ ಯುನಿಟ್‌ಗೆ 5.48ರೂ.ನಂತೆ ದರ ನಿಗದಿಪಡಿಸಿದ್ದು, ಖರೀದಿಸಲು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದೊಂದಿಗೆ ವಿದ್ಯುತ್ ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಡಿ.ಕೆ.ಶಿವಕಮಾರ್ ಸದನಕ್ಕೆ ಮಾಹಿತಿ ನೀಡಿದರು.