×
Ad

ಬಿಎಸ್‌ವೈ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

Update: 2017-03-25 20:31 IST

ಬೆಂಗಳೂರು, ಮಾ.25: ಚುನಾವಣಾ ನೀತಿ ಸಂಹಿತೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಿರಂಜನ್‌ಕುಮಾರ್ ವಿರುದ್ಧ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

 ಶನಿವಾರ ನಗರದ ಶೇಷಾದ್ರಿ ರಸ್ತೆಯಲ್ಲಿರುವ ಕಚೇರಿಯಲ್ಲಿ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ಅವರಿಗೆ ವಿಧಾನಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ ಹಾಗೂ ಎಚ್.ಎಂ.ರೇವಣ್ಣ ನೇತೃತ್ವದ ನಿಯೋಗವು ದೂರು ಸಲ್ಲಿಸಿತು.

 ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಭೀಮನಬೀಡು ಗ್ರಾಮದಲ್ಲಿ ಮಾ.23ರಂದು ಉಪ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮತದಾರರಿಂದ ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ದೇವರ ಹೆಸರಿನಲ್ಲಿ ಆಣೆ ಪ್ರಮಾಣ ಮಾಡುವಂತೆ ಒತ್ತಡ ಹೇರುವ ಮೂಲಕ, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

 ಐಪಿಸಿ ಸೆಕ್ಷನ್ 153ಎ, 171ಸಿ ಹಾಗೂ 171ಎಫ್ ಅನ್ವಯ ದೂರು ದಾಖಲಿಸಲಾಗಿದೆ. ಸೋಲಿನ ಭೀತಿಯಲ್ಲಿ ಹತಾಶೆಗೊಂಡಿರುವ ಯಡಿಯೂರಪ್ಪ ಚುನಾವಣೆಯಲ್ಲಿ ಗೆಲುವು ಸಾಧಿಸಲು ವಾಮ ಮಾರ್ಗ ಅನುಸರಿಸುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

 ಉಪ ಚುನಾವಣೆಯಲ್ಲಿ ಬಿಜೆಪಿ ಸೋಲುವುದು ಖಚಿತ. ಚುನಾವಣೆಗೂ ಮುನ್ನಾ ಅಭ್ಯರ್ಥಿಯನ್ನು ತಿರಸ್ಕರಿಸಬೇಕು. ಒಂದು ವೇಳೆ ಬಿಜೆಪಿ ಗೆದ್ದರು ಈ ಗೆಲುವನ್ನು ಅಸಿಂಧುಗೊಳಿಸಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮೂಲಕ ದೂರು ಸಲ್ಲಿಸಲಾಗಿದೆ ಎಂದು ಉಗ್ರಪ್ಪ ತಿಳಿಸಿದರು.

 ಈ ಸಂದರ್ಭದಲ್ಲಿ ಸಾವಯವ ಕೃಷಿ ಅಧ್ಯಕ್ಷ ಸೋಮಶೇಖರ್ ಸೇರಿದಂತೆ ಇತರರು ಇದ್ದರು.

ವಾರ್ತಾಭಾರತಿ ಸುದ್ದಿ ಆಧರಿಸಿ ದೂರು

 ವಾರ್ತಾಭಾರತಿ ವೆಬ್‌ಸೈಟ್‌ನಲ್ಲಿ ಮಾ.23ರಂದು ಈ ಸಂಬಂಧ ಪ್ರಕಟವಾಗಿರುವ ಸುದ್ದಿಯನ್ನು ಆಧರಿಸಿ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ.

-ವಿ.ಎಸ್.ಉಗ್ರಪ್ಪ, ವಿಧಾನಪರಿಷತ್ ಸದಸ್ಯ

ವಾರ್ತಾಭಾರತಿ ಯಲ್ಲಿ ಮಾ.23ರಂದು ಪ್ರಕಟವಾದ ಸುದ್ದಿಯನ್ನು ಒದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

http://www.varthabharati.in/article/karnataka/66812

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News