ಕುಡಿಯುವ ನೀರಿಗೆ ಇನ್ನೂ 200 ಕೋಟಿ ರೂ. ಶೀಘ್ರ ಬಿಡುಗಡೆ: ಕಾನೂನು ಸಚಿವ ಜಯಚಂದ್ರ
ಬೆಂಗಳೂರು, ಎ. 3: ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆ ಇನ್ನೂ 200ಕೋಟಿ ರೂ.ಗಳಷ್ಟು ಅಗತ್ಯವಿದ್ದು, ಶೀಘ್ರದಲ್ಲೆ ಹಣ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದ 1,145 ಗ್ರಾಮಗಳಿಗೆ 1,737 ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. 614 ಖಾಸಗಿ ಕೊಳವೆಬಾವಿಗಳನ್ನು ಸರಕಾರದ ವಶಕ್ಕೆ ಪಡೆದಿದ್ದು, ಆ ನೀರನ್ನು ಜನರಿಗೆ ನೀಡಲಾಗುತ್ತಿದೆ ಎಂದರು.
ಹೊರ ರಾಜ್ಯಗಳಿಂದ ಮೇವು ಖರೀದಿ : ಜಾನುವಾರುಗಳಿಗೆ ಮೇವಿನ ಕೊರತೆ ಇದ್ದು, ಆಂಧ್ರ ಮತ್ತು ಪಂಜಾಬ್‌ನಿಂದ ಮೇವು ಖರೀದಿಗೆ ಟೆಂಡರ್ ಕರೆಯಲಾಗಿದೆ. ರಾಜ್ಯದ 31ತಾಲೂಕುಗಳಲ್ಲಿ ಒಟ್ಟು 81ಗೋಶಾಲೆಗಳನ್ನು ಆರಂಭಿಸಲಾಗಿದೆ. ಅಲ್ಲದೆ, ಬರ ಪೀಡಿತ ಪ್ರದೇಶಗಳಲ್ಲಿ 339 ಮೇವು ಬ್ಯಾಂಕ್ ಸ್ಥಾಪಿಸಿದ್ದು, ಸಬ್ಸಿಡಿ ದರದಲ್ಲಿ ಮೇವು ಪೂರೈಕೆ ಮಾಡಲಾಗುತ್ತಿದೆ ಎಂದರು.
ರೈತರಿಗೆ ಪರಿಹಾರ: ಬರ ಪರಿಹಾರ ಕಾರ್ಯಕ್ಕೆ 4,702 ಕೋಟಿ ರೂ.ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಈವರೆಗೂ ಒಟ್ಟು 1,685 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈಗಾಗಲೇ ಮೊದಲ ಕಂತಿನಲ್ಲಿ ಕೇಂದ್ರ ಬಿಡುಗಡೆ ಮಾಡಿದ್ದ 450ಕೋಟಿ ರೂ.ಗಳಿಗೆ ರಾಜ್ಯ ಸರಕಾರ 221ಕೋಟಿ ರೂ.ಸೇರಿಸಿ ಒಟ್ಟು 671.20ಕೋಟಿ ರೂ.ಗಳನ್ನು 1.20ಲಕ್ಷಕ್ಕೂ ಅಧಿಕ ಮಂದಿ ರೈತರಿಗೆ ನೀಡಲಾಗಿದೆ.
ಇದೀಗ ಕೇಂದ್ರ ಬಿಡುಗಡೆ ಮಾಡಿರುವ 1,235 ಕೋಟಿ ರೂ.ಗಳನ್ನು ಉಳಿದ 10 ಲಕ್ಷಕ್ಕೂ ಅಧಿಕ ಮಂದಿ ರೈತರಿಗೆ ಶೀಘ್ರದಲ್ಲೆ ಇನ್‌ಪುಟ್ ಸಬ್ಸಿಡಿ ರೂಪದಲ್ಲಿ ಬಿಡುಗಡೆ ಮಾಡಲು ರೈತರ ಬ್ಯಾಂಕ್ ಖಾತೆಗಳನ್ನು ಆಧಾರ್ ಸಂಖ್ಯೆಗೆ ಜೋಡಣೆ ಪ್ರಕ್ರಿಯೆ ಕೈಗೊಳ್ಳಲಾಗಿದ್ದು, ಇನ್ನೂ ಹತ್ತು ದಿನಗಳ ಒಳಗಾಗಿ ರೈತರ ಖಾತೆಗೆ ಹಣ ರವಾನಿಸಲಾಗುವುದು ಎಂದರು.
ಬೆಳೆ ನಷ್ಟಕ್ಕೆ ಒಣ ಭೂಮಿ ಹೆಕ್ಟೆರ್‌ಗೆ-6,800 ರೂ. ಮಳೆಯಾಶ್ರಿತ ಪ್ರತಿ ಹೆಕ್ಟೆರ್‌ಗೆ -13,500 ರೂ. ಹಾಗೂ ನೀರಾವರಿ ಪ್ರತಿ ಹೆಕ್ಟೆರ್‌ಗೆ-18 ಸಾವಿರ ರೂ.ನಿಗದಿ ಮಾಡಲಾಗಿದೆ ಎಂದ ಅವರು, ಬರ ಪರಿಸ್ಥಿತಿ ಎದುರಿಸಲು ರಾಜ್ಯ ಸರಕಾರ ಸರ್ವ ಸನ್ನದ್ಧವಾಗಿದೆ. ಆದರೆ, ತೀವ್ರ ಸ್ವರೂಪದ ಅಂತರ್ಜಲ ಕುಸಿತದಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಸಮರ್ಪಕ ರೀತಿಯಲ್ಲಿ ನೀರು ಪೂರೈಕೆ ಆಗುತ್ತಿಲ್ಲ ಎಂದರು.
‘ಕೇಂದ್ರ ಸರಕಾರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಬೆಳೆ ನಷ್ಟಕ್ಕೆ ಪರಿಹಾರ ನೀಡಿದೆ. ಆದರೆ, ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಪೂರೈಕೆಗೆ ಹಣವನ್ನೇ ನೀಡಿಲ್ಲ. ಹೀಗಾಗಿ ಮುಖ್ಯಮಂತ್ರಿಗಳ ಮೂಲಕ ಮತ್ತೊಮ್ಮೆ ಕೇಂದ್ರಕ್ಕೆ ಈ ಬಗ್ಗೆ ಮನವಿ ಸಲ್ಲಿಸಲು ಉದ್ದೇಶಿಸಿಲಾಗಿದೆ’
-ಟಿ.ಬಿ.ಜಯಚಂದ್ರ ಕಾನೂನು ಸಚಿವ