ಜಗಜೀವನ್ ರಾಂ ಹೆಸರಿನಲ್ಲಿ‘ಸಂಶೋಧನಾ ಕೇಂದ್ರ’ ಸ್ಥಾಪನೆ: ಸಮಾಜ ಕಲ್ಯಾಣ ಸಚಿವ ಆಂಜನೇಯ
ಬೆಂಗಳೂರು, ಎ.5: ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್ ರಾಮ್ ಅವರ ಹೆಸರಿನಲ್ಲಿ ಬೆಂಗಳೂರು ನಗರದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಬುಧವಾರ ಬಾಬು ಜಗಜೀವನ್ ರಾಮ್ ಜನ್ಮದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಜಗಜೀವನ್ ರಾಮಗ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿನ ನಿರಾಶ್ರಿತರ ಪುನರ್ವಸತಿ ಕೇಂದ್ರದ ಬಳಿ 5 ಎಕರೆ ಪ್ರದೇಶದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಸಂಶೋಧನಾ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಐಎಎಸ್, ಕೆಎಎಸ್, ಐಪಿಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ತರಬೇತಿ ನೀಡಲಾಗುವುದು ಎಂದ ಅವರು, ನೂರು ಕೋಟಿ ರೂ.ವೆಚ್ಚದಲ್ಲಿ ಸಂಶೋಧನಾ ಕೇಂದ್ರ ನಿರ್ಮಿಸಲಾಗುವುದು ಎಂದು ಹೇಳಿದರು.
ಪ್ರಧಾನಿ ಆಗಬೇಕಿತ್ತು: ಉಪ ಪ್ರಧಾನಿ ಆಗಿದ್ದ ಜಗಜೀವನ್ ರಾಮ್ ದೇಶದ ಅತ್ಯುನ್ನತ ಸ್ಥಾನವಾದ ಪ್ರಧಾನಿ ಸ್ಥಾನವನ್ನು ಅಲಂಕರಿಸಬೇಕಿತ್ತು. ಆದರೆ, ವಿವಿಧ ಕಾರಣಗಳಿಂದ ಆ ಹುದ್ದೆ ಅವರಿಗೆ ಧಕ್ಕಲಿಲ್ಲ. ಅದೇನೇ ಇದ್ದರೂ ಅವರು ದೇಶದ ಸರ್ವತೋಮುಖ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಆಂಜನೇಯ ಸ್ಮರಿಸಿದರು.
ದಲಿತರಿಗೆ ‘ಕೈ’ನಲ್ಲೇ ಅವಕಾಶ:ದಲಿತ ಸಮುದಾಯಕ್ಕೆ ಹೆಚ್ಚಿನ ರಾಜಕೀಯ ಅವಕಾಶಗಳನ್ನು ಕಲ್ಪಿಸಿರುವುದು ಕಾಂಗ್ರೆಸ್ ಪಕ್ಷ. ಮಲ್ಲಿಕಾರ್ಜುನ ಖರ್ಗೆ ಲೋಕಸಭೆ ಕಾಂಗ್ರೆಸ್ ನಾಯಕರಾಗಿದ್ದು, ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಸಿಕ್ಕರೆ ಪ್ರಧಾನಿ ಹುದ್ದೆಗೇರಿದರೂ ಅಚ್ಚರಿಪಡಬೇಕಿಲ್ಲ ಎಂದು ಆಂಜನೇಯ ಹೇಳಿದರು.
ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಕಾಂಗ್ರೆಸ್ ಪಕ್ಷವು ದಲಿತರಿಗೆ ಉನ್ನತ ಸ್ಥಾನಗಳನ್ನು ನೀಡಿದೆ. ಹೀಗಿರುವಾಗ ಕಾಂಗ್ರೆಸ್ ಪಕ್ಷದಲ್ಲಿ ದಲಿತರಿಗೆ ಸೂಕ್ತ ಸ್ಥಾನಮಾನ ನೀಡಿಲ್ಲ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಆಂಜನೇಯ ತಳ್ಳಿಹಾಕಿದರು.
ತಾನೂ ಆಕಾಂಕ್ಷಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾನೂ ಒಬ್ಬ ಆಕಾಂಕ್ಷಿಯಾಗಿದ್ದು, ಆ ಹುದ್ದೆಯನ್ನು ನೀಡಿದರೆ ಸಮರ್ಥವಾಗಿ ನಿರ್ವಹಿಸುವೆ. ಆದರೆ, ಈ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳುವುದು ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಸೇರಿದಂತೆ ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಸಂಸದ ಕೆ.ಎಚ್.ಮುನಿಯಪ್ಪ ಪ್ರತಿಕ್ರಿಯೆ ನೀಡಿದರು.
‘ದಲಿತ ಮುಖ್ಯಮಂತ್ರಿ ಆಯ್ಕೆಗೆ ಜನಾದೇಶ ಅಗತ್ಯ. ಜನಪ್ರತಿನಿಧಿಗಳು, ಪಕ್ಷದ ವರಿಷ್ಟರು, ದಲಿತ ಮುಖ್ಯಮಂತ್ರಿ ಆಯ್ಕೆ ಸಂಬಂಧ ಚುನಾವಣೆ ಬಳಿಕ ತೀರ್ಮಾನ ಕೈಗೊಳ್ಳಲಿದ್ದಾರೆ’
-ಎಚ್.ಆಂಜನೇಯ ಸಮಾಜ ಕಲ್ಯಾಣ ಸಚಿವ