ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣ: ಸಚಿನ್ ನಾಯಕ್ ಬಂಧನ
ಬೆಂಗಳೂರು, ಎ.5: ಕಡಿಮೆ ಬೆಲೆಗೆ ಫ್ಲಾಟ್ ಇದೆ ಎಂದು ನಂಬಿಸಿ ಎರಡು ಸಾವಿರಕ್ಕೂ ಅಧಿಕ ಮಂದಿಗೆ ಕೋಟ್ಯಂತರ ರೂಪಾಯಿ ವಂಚಿಸಿದ್ದ ಆರೋಪದ ಮೇಲೆ ಸಚಿನ್‌ನಾಯಕ್‌ನನ್ನು ಬಂಧಿಸಿರುವ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಡ್ರೀಮ್ಸ್ ಇಂಡಿಯಾ ಇನ್ಪ್ರಾ ಲಿ., ಟಿಜಿಎಸ್ ಕನ್‌ಸ್ಟ್ರಕ್ಷನ್‌ಪ್ರೈ.ಲಿ, ಗೃಹ ಕಲ್ಯಾಣ್ ಪ್ರೈ.ಲಿ ಹೆಸರಿನಲ್ಲಿ ನಕಲಿ ರಿಯಲ್ ಎಸ್ಟೇಟ್ ಸಂಸ್ಥೆಗಳನ್ನು ಸ್ಥಾಪಿಸಿ, ಈ ಬಗ್ಗೆ ಜಾಹೀರಾತುಗಳನ್ನು ನೀಡಿ, ಸಾರ್ವಜನಿಕರನ್ನು ನಂಬಿಸಿ ಅವರಿಂದ ಕೋಟ್ಯಂತರ ರೂ. ಹಣವನ್ನು ಸಂಗ್ರಹಿಸಿ ವಂಚಿಸುತ್ತಿದ್ದ ಪ್ರಮುಖ ಆರೋಪಿ ಸಚಿನ್‌ನಾಯಕ್, ಅನುಪ್ ಕೆ.ಎಂ ಸೇರಿದಂತೆ ಕೆಲ ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದು, ಹಲವಾರು ಮಾಹಿತಿ ಕಲೆ ಹಾಕಿದ್ದಾರೆ.
ಆರೋಪಿಗಳಿಂದ ಮೋಸ ಹೋದವರು ಸಿಐಡಿ ಕಚೇರಿ 080-22094451ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಸಾವಿರಾರು ಮಂದಿ ಅಮಾಯಕರು ಆರೋಪಿಗಳನ್ನು ನಂಬಿ ಮೋಸ ಹೋಗಿರುವುದು ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ದಾಖಲಾದ 82 ಪ್ರಕರಣಗಳನ್ನು ಬೇದಿಸಲು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪ್ರತ್ಯೇಕ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಅಲ್ಲದೆ, ರಾಜ್ಯಾದ್ಯಂತ ತೀವ್ರ ಚರ್ಚೆಗೀಡಾಗಿದ್ದ ಈ ಪ್ರಕರಣವನ್ನು ಸಿಐಡಿ ತನಿಖೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದರು.