×
Ad

ಅಡ್ಡ ಮತದಾನ ಮಾಡಲು ಕುಮಾರಸ್ವಾಮಿಯೇ ಹೇಳಿದ್ದರು: ಝಮೀರ್ ಅಹ್ಮದ್ ಖಾನ್ ಗಂಭೀರ ಆರೋಪ

Update: 2017-04-09 18:13 IST

ಬೆಂಗಳೂರು, ಎ. 9: ‘ಹೂವು ಹಿಡಿದರೆ ಕೆಳಗೆ ಬೀಳ್ತೀವಿ, ಕೈ ಹಿಡಿದರೆ ಏಳ್ತೀವಿ’ ಹೀಗೆಂದು ಹೇಳುವ ಮೂಲಕ ಜೆಡಿಎಸ್ ಬಂಡಾಯ ಶಾಸಕ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಕಾಂಗ್ರೆಸ್ ಸೇರುವ ಸ್ಪಷ್ಟ ಸೂಚನೆ ನೀಡಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಸಭಾ ಚುನಾವಣೆ ವೇಳೆ ಕುಮಾರಸ್ವಾಮಿ ಹೇಳಿದಂತೆ ನಾವೆಲ್ಲಾ ನಡೆದುಕೊಂಡಿದ್ದೇವೆ. ಅಡ್ಡ ಮತದಾನ ಮಾಡಲು ಕುಮಾರಸ್ವಾಮಿಯೇ ಹೇಳಿದ್ದರು ಎಂದು ಗಂಭೀರ ಆರೋಪ ಮಾಡಿದರು. ಅಡ್ಡ ಮತದಾನಕ್ಕೆ ಸಂಬಂಧಪಟ್ಟಂತೆ ಕುಮಾರಸ್ವಾಮಿ ಯಾವ ದೇವಸ್ಥಾನಕ್ಕೆ ಬಂದರೂ ನಾನು ಹೋಗಲು ಸಿದ್ದ. ಅಡ್ಡ ಮತದಾನ ಮಾಡಿರುವ ಸತ್ಯ ರಾಜ್ಯದ ಜನರಿಗೆ ತಿಳಿಯಲಿ ಎಂದು ಹೇಳಿದರು.

ಕಾಂಗ್ರೆಸ್ ಸೇರ್ಪಡೆ ಸಂಬಂಧ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೊಂದಿಗೆ ಒಂದು ಸುತ್ತಿನ ಸಮಾಲೋಚನೆ ನಡೆಸಿದ್ದೇವೆ. ಜೆಡಿಎಸ್‌ನಿಂದ ಮತ್ತೊಮ್ಮೆ ಆಹ್ವಾನ ಬಂದರೆ ಯೋಚನೆ ಮಾಡುತ್ತೇವೆ ಎಂದರು.

ಪಕ್ಷದ ಶಾಸಕರೊಬ್ಬರು ಮದುವೆ ಆಮಂತ್ರಣ ನೀಡಲು ಹೋದಾಗ ಸ್ವೀಕರಿಸಬೇಕಿತ್ತು. ಆದರೆ ಕುಮಾರಸ್ವಾಮಿ  ಮನೆ ಬಾಗಿಲಿಗೆ ಬಂದ ಸ್ವಪಕ್ಷ ಶಾಸಕರನ್ನ ಮನೆಯೊಳಗೆ ಬಿಟ್ಟುಕೊಂಡಿಲ್ಲ. ಜೆಡಿಎಸ್‌ನಲ್ಲಿ ನಾವು ಬದುಕಬೇಕೆಂದೇನಿಲ್ಲ. ಕುಮಾರಸ್ವಾಮಿಗೆ ರಾಜಕೀಯ ಅನಿವಾರ್ಯ. ನಾವ್ಯಾರು ರಾಜಕೀಯ ನಂಬಿ ಬದುಕುತ್ತಿಲ್ಲ. ಜನರಿಗೋಸ್ಕರ ಸ್ವಾಭಿಮಾನ ಬಿಟ್ಟು ಜೆಡಿಎಸ್ ನಲ್ಲಿದ್ದೇವೆ ಎಂದು ಝಮೀರ್ ಅಹ್ಮದ್ ಖಾನ್ ಇದೇ ಸಂದರ್ಭ ಹೇಳಿದರು.

ಕುಮಾರಸ್ವಾಮಿ ಹಾಗೂ ದೇವೇಗೌಡರಿಗಾಗಿ ನಾವು ಜೆಡಿಎಸ್‌ನಲ್ಲಿ ಇಲ್ಲ. ನಮ್ಮ ಕ್ಷೇತ್ರದಲ್ಲಿ ಎಷ್ಟೇ ಪರ್ಯಾಯ ನಾಯಕತ್ವ ಸೃಷ್ಟಿ ಮಾಡಿದರೂ ಜನರ ತೀರ್ಮಾನ ಅಂತಿಮ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News