ಮದುವೆಯನ್ನೇ ನಿಲ್ಲಿಸಿದ ಆರತಕ್ಷತೆಯ ಊಟ!

Update: 2017-04-09 12:54 GMT

ಬೆಂಗಳೂರು, ಎ.9: ಆರತಕ್ಷತೆ ಸಮಾರಂಭದ ವರನ ಕಡೆಯ ಮೂವತ್ತು ಮಂದಿಗೆ ರಾತ್ರಿ ‘ಊಟ ಸಿಗಲಿಲ್ಲ’ ಎಂದು ಸೃಷ್ಟಿಯಾದ ಕ್ಷುಲ್ಲಕ ಜಗಳವೊಂದು ಮದುವೆಯನ್ನೇ ನಿಲ್ಲಿಸಿದ ವಿಲಕ್ಷಣ ಘಟನೆ ಇಲ್ಲಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಕೋಣನಕುಂಟೆಯ ಸುಧಾಮಿನಿ ಕಲ್ಯಾಣಮಂಟಪದಲ್ಲಿ ರವಿವಾರ ನಾಗೇಂದ್ರ ಪ್ರಸಾದ್ ಮತ್ತು ಶಿಲ್ಪಾ ಎನ್ನುವವರ ವಿವಾಹದ ಆರತಕ್ಷತೆ ಶನಿವಾರ ಸಂಜೆ ನಡೆದಿತ್ತು. ರಾತ್ರಿ ಕೆಲವರು ಊಟ ಸರಿಯಿಲ್ಲ ಎಂದು ವರನ ಕಡೆಯವರಿಗೆ ದೂರು ನೀಡಿದ್ದರು. ರಾತ್ರಿ 10 ಗಂಟೆ ವೇಳೆಗೆ ಮಾಡಿದ ಅಡುಗೆ ಖಾಲಿಯಾದ ಹಿನ್ನೆಲೆಯಲ್ಲಿ ವರನ ಕಡೆಯವರು ಕೋಪಗೊಂಡಿದ್ದರು. ಸ್ವಲ್ಪ ಸಮಯದ ನಂತರ ವರ-ವಧು ಸಂಬಂಧಿಕರು ಪರಸ್ಪರ ವಾಗ್ವಾದಕ್ಕಿಳಿದಿದ್ದು, ಇದು ವಿಕೋಪಕ್ಕೆ ತಿರುಗಿ ವರ ಆರತಕ್ಷತೆ ಮಧ್ಯೆಯೇ ವೇದಿಕೆಯಿಂದ ಇಳಿದು ಪೋಷಕರೊಂದಿಗೆ ಕಲ್ಯಾಣ ಮಂಟಪದಿಂದ ನೇರವಾಗಿ ಮನೆ ಸೇರಿದ್ದಾನೆ.

ಬಳಿಕ ಕೆಲ ಹಿರಿಯರು ಸಮಾಧಾನ ಪಡಿಸಲು ಮುಂದಾದರಾದರೂ ಅದು ಪ್ರಯೋಜನವಾಗಲಿಲ್ಲ. ರವಿವಾರ ಬೆಳಗ್ಗೆಯೂ ವರನ ಕಡೆಯವರನ್ನು ಸಮಾಧಾನ ಪಡಿಸಲು ಪ್ರಯತ್ನ ನಡೆಸಲಾಯಿತು. ಅಷ್ಟರಲ್ಲಿ ವಧುವಿನ ಕಡೆಯವರು ಕಲ್ಯಾಣ ಮಂಟಪದಿಂದಲೇ ಜಾಗ ಖಾಲಿ ಮಾಡಿದ್ದರು.

ಪ್ರೀತಿಗೆ ಮದುವೆ ಮುರಿದು ಬಿತ್ತು: ಮದುವೆ ನಿಂತು ಹೋಗಲು ಊಟ ಕಾರಣವಲ್ಲ. ವಧು ಬೇರೆ ಯುವಕನನ್ನು ಪ್ರೀತಿಸುತ್ತಿದ್ದಾಳೆ ಎಂದು ವರನ ಸಂಬಂಧಿಕರು ಆರೋಪ ಮಾಡಿದ್ದಾರೆ. ವಧುವಿಗೆ ಬೇರೊಬ್ಬ ಯುವಕನೊಂದಿಗೆ ಪ್ರೇಮಾಂಕುರವಾಗಿತ್ತು. ಪ್ರಿಯಕರನೊಂದಿಗೆ ಮದುವೆಯಾಗಲು ನಿರ್ಧರಿಸಿದ್ದ ಆಕೆಯ ನಿರ್ಧಾರಕ್ಕೆ ಆಕೆಯ ಕುಟುಂಬದವರೂ ಒಪ್ಪಿಕೊಂಡಿದ್ದರು. ಹೀಗಾಗಿ ಮದುವೆ ನಿಲ್ಲಿಸಿದ್ದಾರೆ ಎಂದು ವರನ ಕಡೆಯವರು ಆರೋಪಿಸಿದ್ದಾರೆ. '

ವರನ ಕುಟುಂಬದವರಿಗೆ ಊಟ ಹಾಕದೆ ಜಗಳ ಆರಂಭಿಸಿದ್ದ ವಧುವಿನ ಕುಟುಂಬದವರು, ಸಣ್ಣ ಜಗಳವನ್ನೇ ದೊಡ್ಡದು ಮಾಡಿ ಮದುವೆ ರದ್ದು ಮಾಡಲು ಮುಂದಾಗಿದ್ದಾರೆ ಎಂದು ವರ ನಾಗೇಂದ್ರ ಪ್ರಸಾದ್ ದೂರಿದ್ದಾರೆ.

ಈ ಸಂಬಂಧ ವಧುವಿನ ಕುಟುಂಬಸ್ಥರು ನಾಗೇಂದ್ರ ಪ್ರಸಾದ್ ಸೇರಿದಂತೆ ಸಂಬಂಧಿಕರ ವಿರುದ್ಧ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News