ಬಜೆಟ್‌ನ ಘೋಷಣೆ ಸೇರಿ 2 ಸಾವಿರ ರೂ.ಗೌರವ ಧನ ಹೆಚ್ಚಳ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಎ. 10: ಅಂಗನವಾಡಿ ಕಾರ್ಯಕರ್ತರ ಬೇಡಿಕೆಗಳಿಗೆ ಸ್ಪಂದಿಸಿರುವ ರಾಜ್ಯ ಸರಕಾರ, ಬಜೆಟ್ ಘೋಷಣೆ ಸೇರಿ 2,000 ರೂ. ಹೆಚ್ಚಳಕ್ಕೆ ಸಮ್ಮತಿಸಿದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಮಾತುಕತೆ ಫಲಪ್ರದವಾಗಿದೆ.
ಸೋಮವಾರ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಿದ್ದರಾಮಯ್ಯ, ಪ್ರಸಕ್ತ ಸಾಲಿನಿಂದಲೇ ಅಂಗನವಾಡಿ ಕಾರ್ಯಕರ್ತರಿಗೆ 2 ಸಾವಿರ ರೂ., ಸಹಾಯಕರಿಗೆ 1 ಸಾವಿರ ರೂ. ಹಾಗೂ ಕಿರು ಅಂಗನವಾಡಿ ಕಾರ್ಯಕರ್ತರಿಗೆ 500 ರೂ ಮಾಸಿಕ ಗೌರವ ಧನದಲ್ಲಿ ಹೆಚ್ಚಳ ಆಗಲಿದೆ ಎಂದರು.
ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾ.21ರಿಂದ 24ರವರೆಗೆ ಕಾರ್ಯಕರ್ತರು ನಡೆಸಿದ ಅಹೋರಾತ್ರಿ ಧರಣಿಯನ್ನು ಎ.10ಕ್ಕೆ ಸಭೆ ನಡೆಸುವ ಸರಕಾರದ ಭರವಸೆ ಹಿನ್ನೆಲೆಯಲ್ಲಿ ಹಿಂಪಡೆದಿದ್ದರು. ಇದೀಗ ತಾವು ಆಹ್ವಾನಿಸಿದಂತೆ ಎಲ್ಲ ಮುಖಂಡರು ಸಭೆಗೆ ಆಗಮಿಸಿದ್ದರು ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರ ಎಲ್ಲ ಬೇಡಿಕೆಗಳನ್ನು ಮುಕ್ತ ಮನಸಿನಿಂದ ಆಲಿಸಿ, ಸಹಾನುಭೂತಿಯಿಂದ ಪರಿಗಣಿಸಿದ್ದು, ಗೌರವ ಧನವನ್ನು ಹೆಚ್ಚಳ ಮಾಡಲಾಗಿದೆ. ಅವರ ಉಳಿದ ಬೇಡಿಕೆಗಳನ್ನು ಸರಕಾರ ಇಲಾಖಾ ಮಟ್ಟದಲ್ಲಿ ಪರಿಶೀಲಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಸರಕಾರದ ಈ ನಿರ್ಧಾರದಿಂದ ಕಾರ್ಯಕರ್ತೆಯರ ಗೌರವಧನ 8 ಸಾವಿರ ರೂ. ಗಳಾಗಲಿದೆ. ಇದರಲ್ಲಿ ರಾಜ್ಯ ಸರಕಾರದ ಪಾಲು 6,200 ರೂ. ಹಾಗೂ ಕೇಂದ್ರದ ಪಾಲು ಕೇವಲ 1,800 ರೂ.ಗಳು ಎಂದ ಅವರು, ರಾಜ್ಯ ಸರಕಾರ ಆಡಳಿತಕ್ಕೆ ಬಂದ 4 ವರ್ಷಗಳಲ್ಲಿ ಅಂಗವಾಡಿಯವರ ಗೌರವಧನ 4,400ರೂ.ಗಳಷ್ಟು ಹೆಚ್ಚಳ ಮಾಡಿದಂತಾಗಿದೆ ಎಂದರು.
ಕೇಂದ್ರದ ಕೂಸು: ಶಾಲಾ ಪೂರ್ವ ಶಿಕ್ಷಣ ಹಾಗೂ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸಿ ಮಕ್ಕಳ ಭೌತಿಕ-ಬೌದ್ಧಿಕ ಬೆಳವಣಿಗೆಗಾಗಿ 1975ರಲ್ಲಿ ರೂಪುಗೊಂಡ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕೇಂದ್ರದ ಕೂಸು. ಅಂಗನವಾಡಿ ಕಾರ್ಯಕರ್ತರಿಗೆ ಗೌರವ ಧನ ನೀಡಲು ನಿಯಮ ರೂಪಿಸಲಾಗಿದೆ.
ಈ ಹಿಂದೆ ಕೇಂದ್ರ ಗೌರವಧನದ ಶೇ.90ರಷ್ಟು ಅನುದಾನವನ್ನು ನೀಡುತ್ತಿತ್ತು. ಉಳಿದ ಶೇ.10ರಷ್ಟು ಗೌರವಧನವನ್ನು ರಾಜ್ಯ ಸರಕಾರ ಭರಿಸುತ್ತಿತ್ತು. ಆದರೆ, 2015- 16ನೆ ಸಾಲಿನಿಂದ ಕೇಂದ್ರವು ಗೌರವಧನಕ್ಕಾಗಿ ನೀಡುತ್ತಿದ್ದ ಅನುಪಾತದ ಪ್ರಮಾಣ ಶೇ.60 ಹಾಗೂ ಶೇ.40ಕ್ಕೆ ಕಡಿತಗೊಳಿಸಿದೆ. ಇದೀಗ ಕಾರ್ಯಕರ್ತರ ಗೌರವ ಧನಕ್ಕೆ ಕೇಂದ್ರ ಸರಕಾರ ಒದಗಿಸುತ್ತಿರುವ ಅನುದಾನದ ಅನುಪಾತದ ಪ್ರಮಾಣ ಶೇ.22.5ಕ್ಕೆ ಕುಸಿದಿದೆ.
ಸಿಎಂಗೆ ಅಭಿನಂದನೆ: ಸಿಎಂ ಸಿದ್ದರಾಮಯ್ಯನವರ ನಿರ್ಧಾರವನ್ನು ಸ್ಥಳದಲ್ಲೇ ಹಾಜರಿದ್ದ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳ ಪದಾಧಿಕಾರಿಗಳು ಒಕ್ಕೊರಲಿನಿಂದ ಸ್ವಾಗತಿಸಿದರು. ಅಲ್ಲದೆ, ಮಹತ್ವಯುತ ಈ ತೀರ್ಮಾನಕ್ಕೆ ಸಂತಸ ವ್ಯಕ್ತಪಡಿಸಿ, ಸಿದ್ದಾಮಯ್ಯನವರನ್ನು ಅಭಿನಂದಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ, ಸಿಎಂ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಉಮಾ ಮಹಾದೇವನ್ ಸೇರಿದಂತೆ ಹಿರಿಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
‘ಅಂಗನವಾಡಿ ಕಾರ್ಯಕರ್ತೆಯರು ಗೌರವ ಧನ ಹೆಚ್ಚಳಕ್ಕೆ ಮುಂದಿನ ವರ್ಷವೂ ಯಾವುದೇ ಕಾರಣಕ್ಕೂ ಬೇಡಿಕೆ ಇಡಬೇಡಿ. ಕೇಂದ್ರದ ಅನುದಾನ ಕಡಿತ ಆಗಿದ್ದರೂ, ರಾಜ್ಯ ಸರಕಾರ ಶಕ್ತಿ ಮೀರಿ ಗೌರವಧನ ಹೆಚ್ಚಳ ಮಾಡಿದೆ. ನಮ್ಮ ವಿರುದ್ಧ ನೀವು ಬೀದಿಗೆ ಇಳಿಯಬೇಡಿ’
-ಸಿದ್ದರಾಮಯ್ಯ ಮುಖ್ಯಮಂತ್ರಿ
‘ನಮ್ಮ ಹೋರಾಟ ಶೇ.50ರಷ್ಟು ಯಶಸ್ವಿಯಾಗಿದ್ದು, ನಮ್ಮ ಬೇಡಿಕೆಗಳಿಗೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯನವರನ್ನು ರಾಜ್ಯದ ಎಲ್ಲ ಕಾರ್ಯಕರ್ತೆಯರ ಪರವಾಗಿ ಅಭಿನಂದಿಸುವೆ. ಅನುದಾನ ಹೆಚ್ಚಿಸಲು ಆಗ್ರಹಿಸಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸಲು ಶೀಘ್ರದಲ್ಲೆ ತೀರ್ಮಾನಿಸಲಾಗುವುದು’
-ವರಲಕ್ಷ್ಮಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ
ಗೌರವಧನ
ಕಾರ್ಯಕರ್ತೆಯರಿಗೆ-8 ಸಾವಿರ ರೂ.
ಸಹಾಯಕಿಯರಿಗೆ 4 ಸಾವಿರ ರೂ.
ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ-4,250 ರೂ.