×
Ad

ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಧರಣಿ

Update: 2017-04-10 19:18 IST

ಬೆಂಗಳೂರು,ಎ.10: ಬಿಬಿಎಂಪಿ ಕಾಮಗಾರಿಗಳ ಬಾಕಿ ಬಿಲ್ ಪಾವತಿಗಾಗಿ ಆಗ್ರಹಿಸಿ ಮಹದೇವಪುರ ಗುತ್ತಿಗೆದಾರರ ಸಂಘದ ಸದಸ್ಯರು ಇಂದು ಬೃಹತ್ ಮಹದೇವಪುರ ವಲಯ ಕಚೇರಿ ಮುಂಭಾಗ ಶಾಂತಿಯುತ ಧರಣಿ ನಡೆಸಿದರು.

ಧರಣಿಯ ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ರಂಗನಾಥ್ ಮಾತನಾಡಿ, ಮಹದೇವಪುರ ವಲಯದ 110 ಹಳ್ಳಿಗಳಲ್ಲಿ 2015-16ನೆ ಸಾಲಿನ ಪಿ 3089 ಹಾಗೂ ಪಿ 2654ನ ವಿಶೇಷ ಅಭಿವೃದ್ಧಿಯಡಿಯಲ್ಲಿ ಮಾಡಿರುವ ಕಾಮಗಾರಿಗಳಿಗೆ ಬಾಕಿ ಬಿಲ್ ಒಂದು ವರ್ಷದಿಂದ ಪಾಲಿಕೆ ಬಿಡುಗಡೆ ಮಾಡಿಲ್ಲ ಎಂದು ದೂರಿದರು. 2015-16ನೆ ಸಾಲಿನ ಹಿಂಬಾಕಿ ಹಣ ನೀಡದೆ, ಆಗಲೇ 2016- 17ನೆ ಸಾಲಿನ ಬಿಲ್ ನೀಡಲು ಪಾಲಿಕೆ ಮುಂದಾಗಿದೆ. ಬಿಬಿಎಂಪಿ ಆಯುಕ್ತರು ಮತ್ತು ವಿಶೇಷ ಆಯುಕ್ತರು(ಹಣಕಾಸು) ಅಧಿಕಾರಿಗಳು ಗುತ್ತಿಗೆದಾರರ ಹಣ ಬಿಡುಗಡೆ ಮಾಡಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಆರೋಪಿಸಿದರು.

ಸಾಲ ಮಾಡಿ ತಂದ ಹಣದಿಂದ ಮಹದೇವಪುರ ವಲಯದಲ್ಲಿ ಕಾಮಗಾರಿ ಮಾಡಲಾಗಿದೆ. ಆದರೆ, ಸಾಲ ತೀರಿಸುವುದಕ್ಕೆ ಸರಿಯಾದ ಸಮಯಕ್ಕೆ ಸರಕಾರ ಬಿಲ್ ಪಾವತಿ ಮಾಡದೆ ಬಡ್ಡಿಯನ್ನೂ ಸಹ ತೀರಿಸಲಾಗದೆ ಅತಂತ್ರದಲ್ಲಿ ಸಿಲುಕಿದ್ದೇವೆ ಎಂದು ಅಳಲನ್ನು ತೋಡಿಕೊಂಡರು. ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡ್‌ಗಳಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಬಿಲ್‌ಗಾಗಿ ಕೇಳಲು ಹೋದರೆ ತಾಂತ್ರಿಕ ಕಾರಣ ನೀಡಿ ವಂಚಿಸುತ್ತಿದ್ದಾರೆ ಎಂದು ದೂರಿದರು.

ಇಂದಿನಿಂದ ಶಾಂತಿಯುತ ಧರಣಿ ಆರಂಭಿಸಿದ್ದು, ಕೂಡಲೇ ಬಾಕಿ ಬಿಲ್ ಪಾವತಿ ಮಾಡದಿದ್ದರೆ ಮೂರ್ನಾಲ್ಕು ದಿನಗಳ ಬಳಿಕ ಉಪವಾಸ ಸತ್ಯಾಗ್ರಹ ಆರಂಭಿಸಬೇಕಾಗುತ್ತದೆ ಎಂದು ಪಾಲಿಕೆಗೆ ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ಗುತ್ತಿಗೆದಾರರಾದ ಪ್ರಭಾಕರ್‌ರೆಡ್ಡಿ, ರಾಮಯ್ಯ, ವೆಂಕಟರಾಮಯ್ಯ, ಮುನಿರಾಜು, ರವಿಶಂಕರ್, ಎಸ್.ಆರ್. ವೇಣುಗೋಪಾಲ್, ಬಿ.ಎನ್.ಪ್ರಕಾಶ್ ಸೇರಿದಂತೆ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News