×
Ad

ಶೇ.33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಒತ್ತಡ ಹೇರಬೇಕಾದ ಅಗತ್ಯವಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2017-04-11 18:13 IST

ಬೆಂಗಳೂರು, ಎ.11: ಸಂಸತ್‌ನಲ್ಲಿ ಮಹಿಳಾ ಸಮುದಾಯಕ್ಕೆ ಶೇ.33ರಷ್ಟು ರಾಜಕೀಯ ಮೀಸಲಾತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಒತ್ತಡ ಹೇರಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಹಾಗೂ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಮಲ್ಲಿಕಾ ಘಂಟಿಯವರಿಗೆ ಅಕ್ಕಮಹಾದೇವಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ರಾಜಕೀಯ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.

ದೇಶದಲ್ಲಿ ಮಹಿಳಾ ಸಮುದಾಯವು ಶೋಷಿತ ವರ್ಗಕ್ಕೆ ಸೇರಿದೆ. ದಲಿತ, ಹಿಂದುಳಿದ ಸಮುದಾಯದ ಏನೆಲ್ಲಾ ಸಮಸ್ಯೆಗಳಿವೆಯೋ ಅದೆಲ್ಲವನ್ನು ಮಹಿಳಾ ಸಮುದಾಯವು ಅನುಭವಿಸುತ್ತಿದೆ. ಹೀಗಾಗಿ ನಾನು ಮಹಿಳಾಪರ. ಅವರ ಅಭಿವೃದ್ಧಿಗಾಗಿ ಸರಕಾರದ ವತಿಯಿಂದ ಏನೆಲ್ಲಾ ಸಾಧ್ಯವಾಗುತ್ತದೆಯೋ ಅದೆಲ್ಲವನ್ನು ಮಾಡಲು ಸಿದ್ಧನಿದ್ದೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಚಿವ ಸ್ಥಾನಕೊಡಲು ಸಿದ್ಧನಿದ್ದೇನೆ: ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸ್ಥಾನಕೊಡಲು ನನ್ನ ಅಭ್ಯಂತರವೇನು ಇಲ್ಲ. ಆದರೆ, ನಮ್ಮ ಪುರುಷ ಪ್ರಧಾನ ಸಮಾಜ ಅದನ್ನು ಮುಕ್ತವಾಗಿ ಸ್ವಾಗತಿಸುವಂತಹ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ. ಹೀಗಾಗಿ ಪುರುಷರು ಮಹಿಳಾ ಸಮುದಾಯದ ಏಳ್ಗೆಗೆ ಸಹಕರಿಸಬೇಕು. ಆಗ ಮಾತ್ರ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯವೆಂದು ಅವರು ಹೇಳಿದರು.

ಕಿತ್ತೂರುರಾಣಿ ಚೆನ್ನಮ್ಮ ಜಯಂತಿ: ಮುಂದಿನ ವರ್ಷದಿಂದ ಸರಕಾರದಿಂದಲೇ ಅಕ್ಕಮಹಾದೇವಿ ಜಯಂತಿಯಂತೆ ಕಿತ್ತೂರುರಾಣಿ ಚೆನ್ನಮ್ಮ ಜಯಂತಿಯನ್ನು ಆಚರಿಸಲಾಗುವುದು. ಆ ಮೂಲಕ ಸಾಧು ಸಂತರು, ಸೂಫಿಗಳ ಜಯಂತಿಗಳನ್ನು ಆಚರಿಸುವ ಮೂಲಕ ಅವರ ಸಂದೇಶಗಳನ್ನು ಜನತೆಗೆ ಪರಿಚಯಿಸುವುದು ಸರಕಾರದ ಜವಾಬ್ದಾರಿ ಎಂದು ಅವರು ಹೇಳಿದರು.

  ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿ ಮಲ್ಲಿಕಾ ಘಂಟಿ ಮಾತನಾಡಿ, 12ನೆ ಶತಮಾನದ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಅಕ್ಕಮಹಾದೇವಿ ಪಟ್ಟಪಾಡು ಒಂದೆರಡಲ್ಲ. ಶಿವಶರಣರು ಸೇರಿದಂತೆ ಇಡೀ ಸಮಾಜ ಅವಳನ್ನು ಹೆಜ್ಜೆ, ಹೆಜ್ಜೆಗೂ ಪ್ರಶ್ನೆಗಳನ್ನು ಕೇಳುತ್ತಾ ಪರೀಕ್ಷಿಸುತ್ತಿತ್ತು. ಅದೆಲ್ಲವನ್ನೂ ಮೀರಿ ಮಹಿಳಾ ಸಮುದಾಯಕ್ಕೆ ಹೊಸ ಅಸ್ಮಿತೆಯನ್ನು ತಂದು ಕೊಟ್ಟವಳು ಅಕ್ಕಮಹಾದೇವಿ ಎಂದು ಸ್ಮರಿಸಿದರು.

12ನೆ ಶತಮಾನದ ಅಕ್ಕಮಹಾದೇವಿ ಬದುಕಿನ ಒಳನೋಟಗಳೇ ಮಹಿಳಾ ಸಮುದಾಯಕ್ಕೆ ಮಾದರಿ. ಆಕೆಯ ತತ್ವಗಳನ್ನು ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತಗೊಳಿಸದೆ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳ ಬೆಳವಣಿಗೆಯ ದೃಷ್ಟಿಯಿಂದ ಅವಲೋಕಿಸಬೇಕಾಗಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಉಮಾಶ್ರೀ, ಮಾಜಿ ಸಚಿವ ಲೀಲಾವತಿ ಆರ್.ಪ್ರಸಾದ್. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವಸುಂಧರಾ ಭೂಪತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ್ ಮತ್ತಿತರರಿದ್ದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಹಿಳಾ ಮೀಸಲಾತಿಯ ವಿರೋಧಿಯಾಗಿದ್ದಾರೆ. ಈ ಹಿಂದೆ ಸಂಸತ್‌ನಲ್ಲಿ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಗಾಗಿ ನಡೆದ ಚೆರ್ಚೆಯ ವೇಳೆ ಯೋಗಿ ಆದಿತ್ಯನಾಥ ಮಹಿಳೆಯರಿಗೆ ಮೀಸಲಾತಿ ಬೇಡವೇ ಬೇಡವೆಂದು ಬಲವಾಗಿ ವಿರೋಧಿಸಿದ್ದರು.
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News