×
Ad

ದೇವರ ಹೆಸರಲ್ಲಿ ಬ್ಲಾಕ್‌ಮೇಲ್ ರಾಜಕಾರಣ: ಬರಗೂರು ರಾಮಚಂದ್ರಪ್ಪ

Update: 2017-04-11 18:50 IST

ಬೆಂಗಳೂರು, ಎ.11: ದೇವರ ಹೆಸರನ್ನು ಹೇಳಿ ಜನರ ಭಾವನೆಗಳನ್ನು ಕೆರಳಿಸಲಾಗುತ್ತಿದ್ದು, ಮುಗ್ಧ ಜನರನ್ನು ಬ್ಲಾಕ್‌ಮೇಲ್ ರಾಜಕಾರಣಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಆರೋಪಿಸಿದ್ದಾರೆ.

ಅವಿರತ ಪುಸ್ತಕ ಪ್ರಕಾಶನ, ಬೆಂಗಳೂರು ಆರ್ಟ್ ಫೌಂಡೇಷನ್ ಹಾಗೂ ಸಂಸ ಥಿಯೇಟರ್‌ನ ಸಹಭಾಗಿತ್ವದಲ್ಲಿ ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ‘ಭೀಮಯಾನ ಅರಿವಿನ ಪಯಣ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಪ್ರಜಾಪ್ರಭುತ್ವದ ಪರಿಭಾಷೆಯೇ ಗೊತ್ತಿಲದ ಜನ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ. ಅಂಥವರು ರಾಜಕೀಯದಲ್ಲಿ ದೇವರ ಹೆಸರನ್ನು ಮುಂದೆ ಮಾಡಿ ಜನರ ಭಾವನೆಗಳನ್ನು ಕೆರಳಿಸುವುದರ ಜತೆಗೆ ಧರ್ಮ ಮತ್ತು ಜಾತಿ-ಜಾತಿಗಳ ನಡುವೆ ಸಂಘರ್ಷ ಸೃಷ್ಟಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಬಿದ್ದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ ಎಂದರು.

ದೇಶದಲ್ಲಿ ಇಂದಿಗೂ ಮಲಹೊರುವ ಪದ್ಧತಿ ಜಾರಿಯಾಗಿರುತ್ತಿರುವ ಉದಾಹರಣೆಗಳು ಇವೆ. 1.84 ಕೋಟಿ ಜನ ಕೈಯಲ್ಲಿ ಮಲ ಹೊರುತ್ತಿದ್ದಾರೆ. ಸುಮಾರು 8 ಕೋಟಿ ಜನ ಬರೀ ಕೈಯಲ್ಲಿ ಚರಂಡಿ ಸ್ವಚ್ಛ ಮಾಡುತ್ತಿದ್ದಾರೆ. ಒಟ್ಟು ಜನಸಂಖ್ಯೆಯಲ್ಲಿ ಸುಮಾರು 10 ಕೋಟಿ ಜನ ಇದೇ ಕಾರ್ಯದಲ್ಲಿ ನಿರತರಾಗಿದ್ದಾರೆ. ಹೀಗಿರುವಾಗ ಸ್ವಚ್ಛ ಭಾರತ ಯೋಜನೆ ಈ ಅನಿಷ್ಟ ಪದ್ಧತಿಯನ್ನು ಅಣಕಿಸುವಂತಿದೆ ಎಂದು ಅವರು ಟೀಕಿಸಿದರು.

ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಅರೆ ಪ್ರಜ್ಞೆಯಲ್ಲಿ ಅರಿತವರು ಅವರನ್ನು ಟೀಕಿಸುತ್ತಾರೆ. ಅಲ್ಲದೆ, ಅವರನ್ನು ತಾತ್ವಿಕವಾಗಿ ನೋಡದೆ ವೈಯಕ್ತಿವಾಗಿ ನೋಡಲಾಗುತ್ತಿದೆ. ದೇಶದಲ್ಲಿನ ಅಸ್ಪ್ರಶ್ಯರಲ್ಲದೇ ದಮನಿತರ ಪರವಾಗಿ ಅಂಬೇಡ್ಕರ್ ಶ್ರಮಿಸಿದ್ದರು. ಕಾರ್ಮಿಕರು, ಮಹಿಳೆಯರು ಹಕ್ಕುಗಳ ರಕ್ಷಣೆಗೆ ಹೋರಾಟ ಮಾಡಿದ್ದರು. ಆದರೆ ಅವರ ಬಗ್ಗೆ ಅಲ್ಪ ಸ್ವಲ್ಪ ಅರಿತಿರುವವರು ದಲಿತರ ನಾಯಕ ಎಂದು ಬಿಂಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಭೀಮಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ರಾಜ್ಯದಲ್ಲಿ ಪಕ್ಷ ರಹಿತವಾದ ಪ್ರಬಲ ದಲಿತ ಸಂಘಟನೆ ಇದ್ದಿದ್ದರೆ ವಿರೋಧ ಪಕ್ಷದಲ್ಲಿ ನಿದ್ದೆ ಮಾಡುತ್ತಿರುವ ರಾಜಕೀಯ ಪಕ್ಷವನ್ನು ಬಡಿದೆಬ್ಬಿಸುವ ಕೆಲಸ ಮಾಡಬಹುದಿತ್ತು. ಆದರೆ ದಲಿತ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ಜನಾಂಗದ ಅಭಿವೃದ್ಧಿ ಮರೆತಿದ್ದಾರೆ. ಅಲ್ಲದೆ, ರಾಜಕೀಯ ಪಕ್ಷಗಳ ಅಡಿಯಾಳಾಗುತ್ತಿದ್ದಾರೆ. ಯಾವುದೋ ಒಂದು ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಂಡು ಅವರು ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡಮಿ ಮಾಜಿ ಅಧ್ಯಕ್ಷ ಸಿ.ಚಂದ್ರಶೇಖರ್, ಹಂದಲಗೆರೆ ಗಿರೀಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News