×
Ad

ಶಿಕ್ಷಣವೆಂದರೇ ಕೇವಲ ಓದು-ಬರವಣಿಗೆ ಮಾತ್ರವಲ್ಲ: ವಿಮಲಾ ರಂಗಾಚಾರ್

Update: 2017-04-12 17:50 IST

ಬೆಂಗಳೂರು, ಎ.12: ಶಿಕ್ಷಣವೆಂದರೆ ಕೇವಲ ಓದು ಹಾಗೂ ಬರವಣಿಗೆ ಮಾತ್ರವಲ್ಲ, ಪ್ರತಿಯೊಂದರಲ್ಲೂ ಸೃಜನಾತ್ಮಕತೆಯಿಂದ ಕಾಣುವಂತಹ ಒಳನೋಟವೇ ನಿಜವಾದ ಶಿಕ್ಷಣವೆಂದು ಸಂಸ್ಕೃತಿ ಚಿಂತಕಿ ವಿಮಲಾ ರಂಗಾಚಾರ್ ಅಭಿಪ್ರಾಯಿಸಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್ ಮತ್ತು ಉನ್ನತ ಶಿಕ್ಷಣ ಇಲಾಖೆ ನಗರದ ಚಿತ್ರಕಲಾ ಪರಿಷತ್‌ನಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ‘ದೃಶ್ಯಕಲಾ ಸ್ಪಂದನ’ ಮಹಿಳೆಯರ ಸೃಜನಶೀಲತೆಯ ವಿಕಸನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಚಿತ್ರಕಲಾ ಪರಿಷತ್ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಶಿಕ್ಷಣವನ್ನು ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಿಂದಿನ ಕಾಲದಲ್ಲಿ ಮಹಿಳೆಯನ್ನು ಕೇವಲ ಮದುವೆಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಆದರೆ, ಕಾಲ ಬದಲಾದಂತೆ ಮಹಿಳೆ ಹಾಗೂ ಪುರುಷನ ಚಿಂತನೆಗಳು ವಿಕಾಸಗೊಂಡಂತೆ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಗೆ ಪುರುಷನಷ್ಟೆ ಸರಿಸಮಾನವಾದ ಅವಕಾಶ ಸಿಗಲಾರಂಭಿಸಿದೆ. ಇವೆಲ್ಲಾ ಅವಕಾಶಗಳನ್ನು ಮಹಿಳೆ ಸಮರ್ಥವಾಗಿ ಸದುಪಯೋಗ ಪಡಿಸಿಕೊಳ್ಳುತ್ತಿದ್ದಾಳೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕ ಚಿತ್ರಕಲಾ ಪರಿಷತ್‌ನ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಹಿಂದಿನ ಕಾಲದಲ್ಲಿ ಚಿತ್ರಕಲೆ, ಸಂಗೀತ ಸೇರಿದಂತೆ ಹಲವಾರು ಕಲಾಪ್ರಕಾರಗಳಿಗೆ ಸಾಂಪ್ರದಾಯಿಕ ಶಿಕ್ಷಣವಿರಲಿಲ್ಲ. ಆಧುನಿಕ ಶಿಕ್ಷಣ ಪದ್ಧತಿಯಿಂದ ಪ್ರತಿಯೊಂದು ಕಲಾ ಪ್ರಕಾರಗಳಿಗೆ ತನ್ನದೇ ಆದ ವೈಶಿಷ್ಟತೆಯನ್ನು ಕೊಡುತ್ತಾ ವಿಸ್ತರಿಸಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ದೃಶ್ಯಕಲಾ ಸ್ಪಂದನದ ಸಂಯೋಜಕಿ ಟಿ.ವಿ.ತಾರಾಕೇಶ್ವರಿ, ಪ್ರೊ.ಎಂ.ಜೆ.ಕಮಲಾಕ್ಷಿ, ಹಿರಿಯ ಕಲಾವಿದ ಅಪ್ಪಾಜಯ್ಯ ಹಾಗೂ ಐವತ್ತು ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.

ಇಂದಿನಿಂದ(ಎ.12) ಪ್ರಾರಂಭಗೊಂಡಿರುವ ದೃಶ್ಯಕಲಾ ಸ್ಪಂದನ ಮಹಿಳೆಯರ ಸೃಜನಶೀಲತೆಯ ವಿಕಸನ ಶಿಬಿರವು ಎ.15ರವರೆಗೆ ನಡೆಯಲಿದ್ದು, ಸುಮಾರು 50ಕ್ಕೂ ಹೆಚ್ಚು ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ‘ಕರ್ನಾಟಕ ಪಾರಂಪರಿಕ’ ವಿಷಯದ ಆಧಾರದಲ್ಲಿ ಮೇಲೆ ಶಿಬಿರಾರ್ಥಿಗಳು ಕಲಾಕೃತಿಗಳನ್ನು ರಚಿಸಲಿದ್ದಾರೆ.
-ಟಿ.ವಿ.ತಾರಾಕೇಶ್ವರಿ ಸಂಯೋಜಕಿ, ದೃಶ್ಯಕಲಾ ಸ್ಪಂದನ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News