×
Ad

ಎ.14ರಂದು ಗುರುಪ್ರಸಾದ್ ಗೆ 'ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ' ಪ್ರದಾನ

Update: 2017-04-12 17:57 IST

ಬೆಂಗಳೂರು, ಎ. 12: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ನೀಡುವ 2017ನೆ ಸಾಲಿನ ಪ್ರತಿಷ್ಠಿತ 'ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ'ಗೆ ಹಿರಿಯ ದಲಿತ ಮುಖಂಡ, ಮಂಡ್ಯ ಮೂಲದ ಗುರುಪ್ರಸಾದ್ ಕೆರಗೋಡು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿಯು 5 ಲಕ್ಷ ರೂ., ಬಂಗಾರದ ಪದಕ, ಪ್ರಶಸ್ತಿ ಫಲಕ ಒಳಗೊಂಡಿದೆ. ಎ.14ರಂದು ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿರುವ ಅಂಬೇಡ್ಕರ್ ಅವರ 126ನೆ ಜನ್ಮದಿನ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದರು.

ಹಿರಿಯ ಮುಖಂಡ ಗುರುಪ್ರಸಾದ್ ಕೆರಗೋಡು ಮೂರು ದಶಕಗಳಿಂದ ದಲಿತಪರ ಸಂಘಟನೆಗಳೊಂದಿಗೆ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೆ, ವೈಯಕ್ತಿಕವಾಗಿ ಅಂಬೇಡ್ಕರ್ ಆಶಯಗಳನ್ನು ಈಡೇರಿಸುವ ದಿಸೆಯಲ್ಲಿ ಕ್ರಿಯಾಶೀಲರಾಗಿ ಅಹರ್ನಿ

ಶಿ ಶ್ರಮಿಸಿದ್ದು, ಅವರ ಸೇವೆಯನ್ನು ಗುರುತಿಸಿ ಆಯ್ಕೆ ಸಮಿತಿ ಸರ್ವಾನುಮತದಿಂದ ಅಂಬೇಡ್ಕರ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.

ಮಂಡ್ಯ ಜಿಲ್ಲೆ ಕೆರಗೋಡು ಗ್ರಾಮದ ನೀಲಂಕಂಠಯ್ಯ ಮತ್ತು ಮಾಯಮ್ಮ ದಂಪತಿ ಪುತ್ರನಾದ ಗುರುಪ್ರಸಾದ್ ಕೆರಗೋಡು ಬಿಕಾಂ ಪದವೀಧರರು. ದಲಿತ ಸಂಘಟನೆ, ಜನಪರ ಹೋರಾಟ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಕೆರಗೋಡು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಚಿವರು, ಶಾಸಕರು ಸೇರಿ ಹಲವು ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅಂಬೇಡ್ಕರ್ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ ಸಿದ್ದಲಿಂಗಯ್ಯ  ಹಾಜರಿದ್ದರು.

'ಪ್ರಶಸ್ತಿಯ ನಿರೀಕ್ಷೆ ಇರಲಿಲ್ಲ. ಡಾ.ಬಿ.ಆರ್‌. ಅಂಬೇಡ್ಕರ್ ಹೆಸರಿನ ಪ್ರಶಸ್ತಿಗೆ ತನ್ನನ್ನು ಆಯ್ಕೆ ಮಾಡಿರುವುದು ಸಂತೋಷ ತಂದಿದೆ. ನನ್ನ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ಇದು ಒಂದು ರೀತಿಯಲ್ಲಿ ಹೋರಾಟಕ್ಕೆ ಸಿಕ್ಕ ಗೌರವ, ದಲಿತ ಚಳವಳಿಯ ಸಶಕ್ತೀಕರಣಕ್ಕೆ ನೆರವಾಗಲಿದೆ'
-ಗುರುಪ್ರಸಾದ್ ಕೆರಗೋಡು ಪ್ರಶಸ್ತಿ ಪುರಸ್ಕೃತರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News