×
Ad

‘ಅಂಬೇಡ್ಕರ್ ವಸತಿ ಶಾಲೆ’ ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭ: ಸಚಿವ ಆಂಜನೇಯ

Update: 2017-04-12 18:39 IST

ಬೆಂಗಳೂರು, ಎ.12: ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೆ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಹೋಬಳಿಗೆ ಒಂದರಂತೆ 125 ಅಂಬೇಡ್ಕರ್ ವಸತಿ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ವರ್ಗದ 6ರಿಂದ 10ನೆ ತರಗತಿಯ ಮಕ್ಕಳ ಶೈಕ್ಷಣಿಕ ಉನ್ನತಿಗಾಗಿ ಈ ವಸತಿ ಶಾಲೆಗಳನ್ನು ಪ್ರಾರಂಭಿಸುತ್ತಿದ್ದು, ಕನ್ನಡ ಮತ್ತು ಆಂಗ್ಲ ಮಾಧ್ಯಮ ಬೋಧನೆ ಮಾಡಲಾಗುತ್ತದೆ ಎಂದರು.

ಪರಿಶಿಷ್ಟರಿಗೆ ವಸತಿ: ವಸತಿ ರಹಿತ ಎಸ್ಸಿ- ಎಸ್ಟಿ ವರ್ಗದವರಿಗೆ ನಗರ-ಗ್ರಾಮೀಣ ಪ್ರದೇಶದಲ್ಲಿ ವಸತಿ ಸೌಲಭ್ಯ ಕಲ್ಪಿಸಲು ‘ಅಂಬೇಡ್ಕರ್ ನಿವಾಸ ಯೋಜನೆ’ಯನ್ನು ಎ.14ರಂದು ಆರಂಭಿಸಲಾಗುತ್ತಿದೆ. ಈ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ 1.75ಲಕ್ಷ ರೂ., ನಗರ ಪ್ರದೇಶದಲ್ಲಿ 2ಲಕ್ಷ ರೂ.ವೆಚ್ಚದಲ್ಲಿ ಮನೆ ನಿರ್ಮಾಣ ಮಾಡಲಾಗುವುದು. ನಿವೇಶನ ಹೊಂದಿರುವ ಪರಿಶಿಷ್ಟರು ವಸತಿ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದರೆ ಅವರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಎಲ್ಲ ಅರ್ಜಿದಾರರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಒಂದು ವೇಳೆ ನಿವೇಶನ ರಹಿತರು ಇದ್ದರೂ, ಭೂಮಿ ಖರೀದಿಸಿ ಅವರಿಗೆ ವಸತಿ ಸೌಲಭ್ಯ ಕಲ್ಪಿಸಲಾಗುವುದು. ಈ ಯೋಜನೆಗೆ 300 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದರು.

ಉದ್ಯೋಗ: ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 1 ಲಕ್ಷ ಮಂದಿ ನಿರುದ್ಯೋಗಿ ಯುವಕರಿಗೆ ಅಗತ್ಯ ತರಬೇತಿ ನೀಡಿ ಸ್ವಯಂ ಉದ್ಯೋಗಕ್ಕೆ ತಲಾ 40 ಸಾವಿರ ರೂ. ಸಾಲ ಸೌಲಭ್ಯ ಕಲ್ಪಿಸಲಾಗುವುದು. ಸಾಲದ ಮೊತ್ತದ ಪೈಕಿ 25 ಸಾವಿರ ರೂ. ಸಬ್ಸಿಡಿ, ಉಳಿದ 15 ಸಾವಿರ ರೂ.ಗಳನ್ನು ಶೇ.6ರ ಬಡ್ಡಿ ದರದಲ್ಲಿ ಸಾಲದ ರೂಪದಲ್ಲಿ ನೀಡಲಾಗುವುದು ಎಂದು ತಿಳಿಸಿದರು.

100 ಕೋಟಿ ರೂ.: ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ 40 ಎಕರೆ ಪ್ರದೇಶದಲ್ಲಿ ಸ್ಥಾಪಿಸುತ್ತಿರುವ ಅಂಬೇಡ್ಕರ್ ಸ್ಕೂಲ್ ಆಫ್ ಎಕಾಮಿಕ್ಸ್‌ಗೆ ಎಸ್ಸಿಪಿ- ಟಿಎಸ್ಪಿ ಯೋಜನೆಯ 100 ಕೋಟಿ ರೂ.ಗಳನ್ನು ಉನ್ನತ ಶಿಕ್ಷಣ ಇಲಾಖೆಗೆ ಒದಗಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News