×
Ad

ಹಜ್‌ಯಾತ್ರೆ-2017 : ಮಹಿಳೆಯರಿಗಾಗಿ 200 ಹೆಚ್ಚುವರಿ ಸೀಟು ಲಭ್ಯ

Update: 2017-04-12 19:32 IST

ಬೆಂಗಳೂರು, ಎ.12: ಮೆಹ್ರಮ್(ಸಂಗಾತಿ) ಜೊತೆಯಲ್ಲಿ ಹಜ್‌ಯಾತ್ರೆಗೆ ತೆರಳಲು ಬಯಸಿರುವ ಮಹಿಳೆಯರಿಗಾಗಿ ಭಾರತೀಯ ಹಜ್ ಸಮಿತಿಯು ದೇಶದ ಎಲ್ಲ ರಾಜ್ಯಗಳಿಗೆ ಅನ್ವಯವಾಗುವಂತೆ 200 ಹೆಚ್ಚುವರಿ ಸೀಟುಗಳನ್ನು ಕಲ್ಪಿಸಿದೆ.

ಶರೀಯತ್ ಪ್ರಕಾರ ಮೆಹ್ರಮ್(ಸಂಗಾತಿ) ಇಲ್ಲದೆ ಮಹಿಳೆಯರು ಹಜ್ ಯಾತ್ರೆಯನ್ನು ಕೈಗೊಳ್ಳಲು ಸಾಧ್ಯವಿಲ್ಲ. ಪ್ರಸಕ್ತ ಸಾಲಿನ ಹಜ್‌ಯಾತ್ರೆಗೆ ಮೆಹ್ರಮ್ ಮಾತ್ರ ಆಯ್ಕೆಯಾಗಿದ್ದು, ಮಹಿಳೆಗೆ ಅವಕಾಶ ಸಿಗದೆ ಇದ್ದರೆ, ಅಂತಹವರು ತಮ್ಮ ಮೆಹ್ರಮ್ ಜೊತೆ ಹಜ್‌ಯಾತ್ರೆ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಈ ಕೋಟಾದಡಿ ಯಾತ್ರೆ ಕೈಗೊಳ್ಳಲು ಬಯಸುವಂತಹ ರಾಜ್ಯದ ಮಹಿಳೆಯರು, ಹಜ್ ಯಾತ್ರೆಯ ಅರ್ಜಿಯನ್ನು ಭರ್ತಿ ಮಾಡಿ ಮೇ 8ರೊಳಗೆ ನಗರದ ರಿಚ್ಮಂಡ್ ರಸ್ತೆಯಲ್ಲಿರುವ ರಾಜ್ಯ ಹಜ್ ಸಮಿತಿಯ ಕಚೇರಿಗೆ ತಲುಪಿಸಬೇಕಿದೆ.

ಕಾರಣಗಳು : ಪ್ರಸಕ್ತ ಸಾಲಿನ ಹಜ್‌ಯಾತ್ರೆಗೆ ಸಂಬಂಧಪಟ್ಟ ಮೆಹ್ರಮ್ ಜೊತೆ ಅರ್ಜಿ ಸಲ್ಲಿಸದಿರಲು ಕಾರಣವೇನು ಎಂಬುದನ್ನು ಈಗ ಅರ್ಜಿ ಸಲ್ಲಿಸುವ ಮಹಿಳೆಯರು ಸ್ಪಷ್ಟಪಡಿಸಬೇಕು. ಮೆಹ್ರಮ್ ಜೊತೆಗಿನ ತಮ್ಮ ಸಂಬಂಧವನ್ನು ದೃಢೀಕರಿಸುವಂತಹ ದಾಖಲೆಗಳನ್ನು ರಾಜ್ಯ ಹಜ್ ಸಮಿತಿಗೆ ಸಲ್ಲಿಸಬೇಕು.
ಒಂದು ವೇಳೆ ಸಂಬಂಧವನ್ನು ದೃಢೀಕರಿಸುವ ದಾಖಲೆಗಳನ್ನು ಸಲ್ಲಿಸುವಲ್ಲಿ ಮಹಿಳೆಯು ವಿಫಲವಾದರೆ ಯಾತ್ರೆಯ ಅರ್ಜಿಯು ತಿರಸ್ಕರಿಸಲ್ಪಡುತ್ತದೆ. ಈಗ ಆಯ್ಕೆ ಮಾಡಿಕೊಂಡಿರುವ ಮೆಹ್ರಮ್ ಜೊತೆಯೆ ಯಾತ್ರೆ ಕೈಗೊಳ್ಳಲು ಉದ್ದೇಶಿಸಿರುವುದಕ್ಕೆ ಕಾರಣವನ್ನು ತಿಳಿಸಬೇಕು.

ಅಲ್ಲದೆ, ಅರ್ಜಿ ಸಲ್ಲಿಸುತ್ತಿರುವ ಮಹಿಳೆಯು ಮುಂದಿನ ವರ್ಷಗಳಲ್ಲಿ ಹಜ್ ಯಾತ್ರೆ ಕೈಗೊಳ್ಳಲು ಯಾಕೆ ಸಾಧ್ಯವಾಗುವುದಿಲ್ಲ. ಚಾಲ್ತಿಯಲ್ಲಿರುವ ಅಂತಾರಾಷ್ಟ್ರೀಯ ಪಾಸ್ ಪೋರ್ಟ್‌ನ ಪ್ರಕಾರ ಮಹಿಳೆಯ ವಯಸ್ಸು, ಕುಟುಂಬದಲ್ಲಿ ಇರುವಂತಹ ಅಥವಾ ಇಲ್ಲದಿರುವ ಮೆಹ್ರಮ್‌ನ ವಿವರಗಳನ್ನು ರಾಜ್ಯ ಹಜ್ ಸಮಿತಿಗೆ ಸಲ್ಲಿಸಬೇಕಿದೆ.

ಭಾರತೀಯ ಹಜ್ ಸಮಿತಿಯು ಸೀಟುಗಳ ಲಭ್ಯತೆಯ ಆಧಾರದಲ್ಲಿ ಅರ್ಜಿಗಳನ್ನು ಪರಿಗಣಿಸಲಿದೆ. 200ಕ್ಕಿಂತ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾದಲ್ಲಿ, ಲಾಟರಿ ಮೂಲಕ ಯಾತ್ರಿಗಳನ್ನು ಆಯ್ಕೆ ಮಾಡಲಾಗುವುದು ಎಂದು ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News