×
Ad

ಬಸ್ ಪ್ರಯಾಣ ದರ ಪರಿಷ್ಕರಣೆ: ರಾಮಲಿಂಗಾರೆಡ್ಡಿ

Update: 2017-04-13 13:12 IST

ಬೆಂಗಳೂರು, ಎ.13: ಬಿಎಂಟಿಸಿ ಬಸ್‌ಗಳಲ್ಲಿ ತಲೆದೋರುವ ಚಿಲ್ಲರೆ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಬಸ್ ಪ್ರಯಾಣ ದರದಲ್ಲಿ ಪರಿಷ್ಕರಣೆ ಮಾಡಿದ್ದು, ಸಾಮಾನ್ಯ ಬಸ್‌ನಲ್ಲಿ ಎರಡನೆ ಹಂತದಲ್ಲಿ 2 ರೂ. ಹಾಗೂ ಹಾಗೂ ವೋಲ್ವೋ ಬಸ್‌ನಲ್ಲಿ ಮೊದಲ ಹಂತದಲ್ಲಿ 5 ರೂ. ಇಳಿಕೆ ಮಾಡಲಾಗಿದ್ದು, ಎ.15ರಿಂದ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಗುರುವಾರ ನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಯಾಣಿಕರು ಹೆಚ್ಚಾಗಿ ಪ್ರಯಾಣಿಸುವ ಒಂದು ಹಾಗೂ ಎರಡನೆ ಹಂತಗಳಲ್ಲಿ ಪ್ರಯಾಣದರವನ್ನು ಇಳಿಕೆ ಮಾಡಲಾಗಿದೆ. ಇದರಿಂದ ಸಾಮಾನ್ಯ ಬಸ್‌ನಲ್ಲಿ ಪ್ರಯಾಣಿಸುವ ಶೇ.25ರಷ್ಟು ಹಾಗೂ ವೋಲ್ವೋದಲ್ಲಿ ಪ್ರಯಾಣಿಸುವ ಶೇ.30ರಷ್ಟು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

1.ರೂ.ಏರಿಕೆ: ಸಾಮಾನ್ಯ ಬಸ್ ಪ್ರಯಾಣ ದರದಲ್ಲಿ ಎರಡನೆ ಹಂತದಲ್ಲಿ 2 ರೂ.ಇಳಿಕೆ ಮಾಡಿದರೆ, 3, 6 ಹಾಗೂ 8ನೆ ಹಂತದಲ್ಲಿ 1 ರೂ.ಏರಿಕೆ ಮಾಡಲಾಗಿದೆ. ಈ ಹಂತಗಳಲ್ಲಿ ಪ್ರಯಾಣಿಕರು ಹೆಚ್ಚಾಗಿ ಪ್ರಯಾಣಿಸುವುದಿಲ್ಲ. ಹಾಗೂ ಚಿಲ್ಲರೆ ಸಮಸ್ಯೆಯೂ ತಲೆದೋರುವುದಿಲ್ಲ. ಹೀಗಾಗಿ 1.ರೂ.ಹೆಚ್ಚಳ ಮಾಡಲಾಗಿದೆ ಎಂದು ಸಚಿವರು ಸಮರ್ಥಿಸಿಕೊಂಡರು.

ಆದಾಯದಲ್ಲಿ ಇಳಿಕೆ: ಬಿಎಂಟಿಸಿ ಬಸ್‌ ಪ್ರಯಾಣ ದರದಲ್ಲಿ ಇಳಿಕೆ ಮಾಡಿರುವುದರಿಂದ ಸಾಮಾನ್ಯ ಸಾರಿಗೆ ಬಸ್‌ಗಳಿಂದ ದಿನಕ್ಕೆ ಒಂದೂವರೆ ಲಕ್ಷ ಹಾಗೂ ಹವಾನಿಯಂತ್ರಿತ ಬಸ್‌ಗಳಿಂದ 3 ಲಕ್ಷ ರೂ.ನಷ್ಟವಾಗಲಿದೆ. ಆದರೂ ಬಸ್‌ ಪ್ರಯಾಣ ದರದಲ್ಲಿ ಕಡಿಮೆ ಮಾಡಿರುವುದರಿಂದ ಹೆಚ್ಚಿನ ಪ್ರಯಾಣಿಕರು ಸಾರಿಗೆ ಬಸ್‌ನಲ್ಲಿ ಸಂಚರಿಸಿ ನಷ್ಟದ ಪ್ರಮಾಣ ಕಡಿಮೆಯಾಗಬಹುದು ಎಂದು ಅವರು ಆಶಿಸಿದರು.

ಎಲೆಕ್ಟ್ರಿಕ್ ಬಸ್ ಸೇವೆ: ನಗರದಲ್ಲಿ 150 ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ತೀರ್ಮಾನ ಕೈಗೊಂಡಿದ್ದು, ಖರೀದಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಅಕ್ಟೋಬರ್, ನವೆಂಬರ್ ವೇಳೆಗೆ ಸರಕಾರದ ವತಿಯಿಂದ 1,500 ಬಸ್‌ಗಳು ಸಿಗಲಿದ್ದು, ಇನ್ನು 1,500 ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲಾಗುತ್ತಿದೆ. ಒಟ್ಟಾರೆ ಬಿಎಂಟಿಸಿ ಬಸ್‌ಗಳ ಸಂಖ್ಯೆ  6 ಸಾವಿರದಿಂದ 9 ಸಾವಿರಕ್ಕೆ ಹೆಚ್ಚಳವಾಗಲಿದೆ ಎಂದು ಅವರು ಹೇಳಿದರು.

ಮಾರ್ಕೊಪೋಲೋ ಬಸ್‌ಗಳಿಂದ ಸಾರಿಗೆ ನಿಗಮಕ್ಕೆ ನಷ್ಟವಾಗಿದ್ದರಿಂದ ಅವುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಈ ಬಸ್‌ಗಳನ್ನು ಹರಾಜಿನಲ್ಲಿ ಒಂದು ಲಕ್ಷದಷ್ಟು ಕನಿಷ್ಠ ಬೆಲೆಗೆ ಕೇಳಿದ್ದರು. ಹೀಗಾಗಿ ಇಡಿ ಬಸ್ ಬದಲು ಬಿಡಿ ಭಾಗಗಳನ್ನು ಐದಾರು ಲಕ್ಷ ರೂ.ಗೆ ಮಾರಾಟ ಮಾಡಿದ್ದೇವೆ. ಕೆಎಸ್ಸಾರ್ಟಿಸಿಯ 45 ಹಾಗೂ ಬಿಎಂಟಿಸಿಯ 96ಬಸ್‌ಗಳ ಬಿಡಿ ಭಾಗಗಳನ್ನು ಮಾರಾಟ ಮಾಡಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ಮಾಡಿದರು.

ಸಾಮಾನ್ಯ ಬಸ್ ಪ್ರಯಾಣ ದರ: 1ನೆ ಹಂತ-5 ರೂ., 2ನೆ ಹಂತ-10ರೂ., 3ನೆ ಹಂತ-15ರೂ., 4ನೆ ಹಂತ-17ರೂ., 5ನೆ ಹಂತ-19ರೂ., 

ವೋಲ್ವೋ ಪ್ರಯಾಣ ದರ: 1ನೆ ಹಂತ-10 ರೂ., 2ನೆ ಹಂತ-20 ರೂ., 3ನೆ ಹಂತ-30ರೂ., 4ನೆ ಹಂತ-40ರೂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News