ವಾಟ್ಸಾಪ್‌ನಲ್ಲಿ ಅಶ್ಲೀಲ ಸಂದೇಶ ನೋಡಿ ಪತ್ನಿಯನ್ನು ಕೊಲೆಗೈದ ಪತಿ
ಬೆಂಗಳೂರು, ಎ.13: ಪತ್ನಿಯ ವಾಟ್ಸಾಪ್‌ನಲ್ಲಿ ಅಶ್ಲೀಲ ಸಂದೇಶ ನೋಡಿ ಪತಿಯೊಬ್ಬ ಆಕೆಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಇಲ್ಲಿನ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಲೈಬ್ರೆರಿ ರಸ್ತೆಯ ಗೋವಿಂದಪ್ಪಬಿಲ್ಡಿಂಗ್‌ನಲ್ಲಿ ವಾಸವಾಗಿದ್ದ ವಸಂತಮ್ಮ (29) ರನ್ನು ಆಕೆಯ ಪತಿ ಮುನಿರಾಜು (34) ಕೊಲೆಗೈದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಟೋ ಚಾಲಕನಾಗಿದ್ದ ಮುನಿರಾಜು 12 ವರ್ಷಗಳ ಹಿಂದೆ ವಸಂತಮ್ಮ ರನ್ನು ಪ್ರೀತಿಸಿ ವಿವಾಹವಾಗಿದ್ದು, ದಂಪತಿಗೆ ಮದನ್ (10) ಹಾಗೂ ಧ್ರುವ (7) ಎಂಬ ಇಬ್ಬರು ಮಕ್ಕಳಿದ್ದಾರೆ. ಬೇಸಿಗೆ ರಜೆ ಇದ್ದುದ್ದರಿಂದ ಇಬ್ಬರು ಮಕ್ಕಳನ್ನು ವಸಂತಮ್ಮ ಮಳವಳ್ಳಿಯ ತಾಯಿಯ ಮನೆಗೆ ಕಳುಹಿಸಿದ್ದರು. ವಿಎಲ್‌ಸಿಸಿ ಮಸಾಜ್ ಸೆಂಟರ್‌ನಲ್ಲಿ ಬ್ಯೂಟಿಷಿಯನ್ನಾಗಿ ಕೆಲಸ ಮಾಡುತ್ತಿದ್ದ ವಸಂತಮ್ಮ ಅವರ ಮೊಬೈಲ್ ವಾಟ್ಸಾಪ್‌ಗೆ ಅಶ್ಲೀಲ ದೃಶ್ಯಗಳು, ಸಂದೇಶಗಳು ಬರುತ್ತಿದ್ದವು. ಇದನ್ನು ಗಮನಿಸಿದ ಮುನಿರಾಜು ಪದೇ ಪದೇ ಜಗಳ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಬುಧವಾರ ರಾತ್ರಿ ಇದೇ ವಿಚಾರವಾಗಿ ದಂಪತಿಯ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಮುನಿರಾಜು, ಪತ್ನಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ತಲಘಟ್ಟಪುರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.