ಹಿರಿಯ ವೈದ್ಯ ಎಸಿಬಿ ಬಲೆಗೆ
Update: 2017-04-13 19:25 IST
ಬೆಂಗಳೂರು,ಎ.13: ಚಿಕಿತ್ಸೆಗಾಗಿ ಲಂಚ ಕೇಳಿದ ಆರೋಪದಡಿ ಹಿರಿಯ ವೈದ್ಯರೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಮೈಸೂರಿನ ಕೆ.ಆರ್.ಆಸ್ಪತ್ರೆಯ ಎಚ್‌ಒಡಿ ಡಾ.ಪುಟ್ಟಸ್ವಾಮಿ ಎನ್ನುವವರ ವಿರುದ್ಧ ಲಂಚ ಸ್ವೀಕಾರ ಆರೋಪದ ಮೇಲೆ ಎಸಿಬಿ ಮೊಕದ್ದಮೆ ದಾಖಲಿಸಿದೆ.
ಪ್ರಕರಣದ ವಿವರ: ವ್ಯಕ್ತಿಯೊಬ್ಬರು ಅಪಘಾತವೊಂದರಲ್ಲಿ ಗಾಯಗೊಂಡು ಕೆ.ಆರ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಶಸ್ತ್ರಚಿಕಿತ್ಸೆ ಮಾಡಲು 26 ಸಾವಿರ ರೂ.ಲಂಚ ನೀಡುವಂತೆ ಹಿರಿಯ ವೈದ್ಯ ಡಾ.ಪುಟ್ಟ ಸ್ವಾಮಿ ಬೇಡಿಕೆಯಿಟ್ಟಿದ್ದರು.ಬಳಿಕ ಆ ವ್ಯಕ್ತಿಯು ಎಸಿಬಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬುಧವಾರ ಡಾ.ಪುಟ್ಟಸ್ವಾಮಿ ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ ಎಂದು ಎಸಿಬಿ ತಿಳಿಸಿದೆ.
ಈ ಸಂಬಂಧ ಡಾ.ಪುಟ್ಟಸ್ವಾಮಿ ವಿರುದ್ಧ ಇಲ್ಲಿನ ಮೈಸೂರು ಜಿಲ್ಲಾ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.