×
Ad

ಮುಂದಿನ ಚುನಾವಣೆಗೂ ನನ್ನದೇ ಸಾರಥ್ಯ: ಮುಖ್ಯಮಂತ್ರಿ

Update: 2017-04-13 19:58 IST

ಬೆಂಗಳೂರು, ಎ.13: 2018ರಲ್ಲಿ ನಡೆಯಲಿರುವ ರಾಜ್ಯದ ವಿಧಾನಸಭಾ ಚುನಾವಣೆಯು ನನ್ನ ನೇತೃತ್ವದಲ್ಲೇ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2013ರ ಚುನಾವಣೆಯ ನಂತರ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದು ಬೇಡ ಎಂದು ನಿರ್ಧರಿಸಿದ್ದೆ. ಆದರೆ, ಬಿಜೆಪಿಯವರ ಹಠ ನೋಡಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ತೀರ್ಮಾನ ಮಾಡಿದ್ದೇನೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ವಿಧಾನಸಭಾ ಚುನಾವಣೆಯ ಪ್ರಚಾರದ ನೇತೃತ್ವವನ್ನು ವಹಿಸಿಕೊಳ್ಳುತ್ತೇನೆ. ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ಹಾಗೂ ಶಾಸಕಾಂಗ ಪಕ್ಷ ನಿರ್ಧರಿಸುತ್ತದೆ ಎಂದು ಹೇಳಿದರು.

ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶವು ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ ಎಂದು ನಾನು ಹೇಳಿದ್ದೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಇದನ್ನು 2018ರ ಚುನಾವಣೆಗೆ ದಿಕ್ಸೂಚಿ, ಮುಂದಿನ ಮುಖ್ಯಮಂತ್ರಿ ನಾನೇ, ಅದಕ್ಕಾಗಿ ಮತ ನೀಡಿ ಎಂದು ಸುಮಾರು ಒಂದು ತಿಂಗಳು ಇಲ್ಲೆ ಠಿಕಾಣಿ ಹೂಡಿ ಪ್ರಚಾರ ಮಾಡಿದರು ಎಂದು ಸಿದ್ದರಾಮಯ್ಯ ಹೇಳಿದರು.

ಸಂಸತ್ತು ಅಧಿವೇಶನ ನಡೆಯುತ್ತಿದ್ದರೂ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಇಲ್ಲೇ ಇದ್ದರು. ಬಿಜೆಪಿಯ ಸಿದ್ಧಾಂತ, ಕಾರ್ಯಕ್ರಮಗಳು, ನರೇಂದ್ರಮೋದಿ ಸರಕಾರದ ಸಾಧನೆ ಯಾವುದನ್ನೂ ಜನರ ಮುಂದಿಟ್ಟಿಲ್ಲ. ಕೇವಲ ವೈಯಕ್ತಿಕ ಟೀಕೆ, ಅಸಂಸದೀಯ ಪದಗಳ ಬಳಕೆ, ಒಣ ಜಂಭದ ಮಾತುಗಳನ್ನು ಆಡುವುದನ್ನು ಮಾತ್ರ ಮಾಡಿದರು ಎಂದು ಮುಖ್ಯಮಂತ್ರಿ ಕಿಡಿಗಾರಿದರು.

ಪ್ರತಾಪ್‌ಸಿಂಹ ಒಬ್ಬ ಸಂಸದನಾಗಿ, ಗುಂಡ್ಲುಪೇಟೆ ಕ್ಷೇತ್ರದ ನಮ್ಮ ಅಭ್ಯರ್ಥಿಯಾಗಿರುವ ಹೆಣ್ಣುಮಗಳ ಬಗ್ಗೆ ಯಾವ ರೀತಿ ಮಾತನಾಡಬೇಕು ಎಂದು ಗೊತ್ತಿಲ್ಲ. ಯಡಿಯೂರಪ್ಪ ಗುಂಡ್ಲುಪೇಟೆ, ನಂಜನಗೂಡು ಕ್ಷೇತ್ರವನ್ನು ದತ್ತು ತೆಗೆದುಕೊಳ್ಳುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದರು. ಆದರೆ, ಬಿಜೆಪಿಯ ಟೀಕೆ, ಆರೋಪಗಳಿಗೆ ತಕ್ಕ ಉತ್ತರ ನೀಡಿದ ಜನತೆಗೆ ಕೋಟಿ ನಮಸ್ಕಾರ ಎಂದು ಸಿದ್ದರಾಮಯ್ಯ ಹೇಳಿದರು.

"ಯಡಿಯೂರಪ್ಪ ಅಥವಾ ಶ್ರೀನಿವಾಸ್‌ಪ್ರಸಾದ್ ನನ್ನ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಿದ್ದರು. ಜನರೇ ಅವರಿಗೆ ಪಾಠ ಕಲಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರು, ಮತದಾರರು ನೀಡುವ ಆಶೀರ್ವಾದವೆ ನಮಗೆ ಮುಖ್ಯ. ಮುಂದಿನ ಚುನಾವಣೆಯಲ್ಲಿ ನಮ್ಮ ಅಭಿವೃದ್ಧಿ ಕಾರ್ಯಗಳು ಮಾತನಾಡುತ್ತವೆ. ಬಿಜೆಪಿಯವರು ಜನರ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ಅದ್ಯಾವುದು ಯಶಸ್ವಿಯಾಗುವುದಿಲ್ಲ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

"ಸಚಿವ ಸಂಪುಟ ಪುನರ್ರಚನೆ ಅಥವಾ ವಿಸ್ತರಣೆ ಮಾಡುವ ಉದ್ದೇಶವಿಲ್ಲ. ಖಾಲಿ ಇರುವ ಎರಡು ಸ್ಥಾನಗಳನ್ನು ಭರ್ತಿ ಮಾಡುತ್ತೇನೆ. ನಾಳೆ ಹೈಕಮಾಂಡ್ ಭೇಟಿಗಾಗಿ ಹೊಸದಿಲ್ಲಿಗೆ ತೆರಳುತ್ತಿದ್ದು, ಆನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಸಿದ್ದರಾಮಯ್ಯ ಹೇಳಿದರು.

ಈ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಎಲ್ಲ ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಎಲ್ಲ ಮುಖಂಡರು, ಪದಾಧಿಕಾರಿಗಳು, ಅಲ್ಲದೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಜಿಲ್ಲಾಧ್ಯಕ್ಷರು, ಕಾರ್ಯಕರ್ತರಿಗೂ ಮುಖ್ಯಮಂತ್ರಿ ಧನ್ಯವಾದ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News