ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕಲ್ ಸ್ಕೂಲ್ ಆಫ್ ಎಕಾನಮಿಕ್ಸ್ ಸಂಸ್ಥೆಗೆ ರಾಷ್ಟ್ರಪತಿಯಿಂದ ಶಿಲಾನ್ಯಾಸ
ಬೆಂಗಳೂರು, ಎ.14: ದೇಶದಲ್ಲಿ ನೂರಾರು ವಿಶ್ವವಿದ್ಯಾಲಯಗಳು, ಸಾವಿರಾರು ಪದವಿ ಕಾಲೇಜುಗಳಿವೆ. ಆದರೂ, ಉನ್ನತ ಶಿಕ್ಷಣಕ್ಕಾಗಿ ನಮ್ಮ ದೇಶದ ವಿದ್ಯಾರ್ಥಿಗಳು ವಿದೇಶಗಳಿಗೆ ಹೋಗುವಂತಾಗಿದೆ ಎಂದು ರಾಷ್ಟ್ರಪತಿ ಪ್ರಣವ್‌ಮುಖರ್ಜಿ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ರಾಜ್ಯ ಸರಕಾರದ ವತಿಯಿಂದ ಸ್ಥಾಪಿಸಲಾಗುತ್ತಿರುವ ‘ಬೆಂಗಳೂರು ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’ನ ಕ್ಯಾಂಪಸ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಭಾರತದ ಐಐಟಿಗಳು ವಿಶ್ವದ ಯಾವುದೆ ಶಿಕ್ಷಣ ಸಂಸ್ಥೆಯೊಂದಿಗೆ ಸ್ಪರ್ಧಿಸುವಷ್ಟು ಗುಣಮಟ್ಟ ಹೊಂದಿದೆ. ಸರ್ ಸಿ.ವಿ.ರಾಮನ್, ಅಮರ್ತ್ಯಸೇನ್ ಅವರಂತಹ ನೊಬೆಲ್ ಪ್ರಶಸ್ತಿ ಪುರಸ್ಕೃತರೆಲ್ಲ ಅಧ್ಯಯನ ಮಾಡಿದ್ದು ಭಾರತೀಯ ವಿಶ್ವವಿದ್ಯಾಲಯಗಳಲ್ಲೆ. ಆದರೆ, ಸ್ವಾತಂತ್ರ ನಂತರ ಯಾವುದೆ ವಿವಿಯಿಂದ ಅಂತಹ ಪ್ರತಿಭಾವಂತರು, ನೊಬೆಲ್ ಪಡೆಯಲು ಅರ್ಹರಾದವರು ಬರಲೇ ಇಲ್ಲ ಎಂದು ರಾಷ್ಟ್ರಪತಿ ಕಳವಳ ವ್ಯಕ್ತಪಡಿಸಿದರು.
ಸಾವಿರಾರು ವರ್ಷಗಳ ಹಿಂದೆಯೆ ನಮ್ಮ ದೇಶದಲ್ಲಿ ವಿಶ್ವವಿದ್ಯಾಲಯಗಳು ಅಸ್ತಿತ್ವದಲ್ಲಿದ್ದವು. ನಳಂದ, ತಕ್ಷಶಿಲಾದಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ನಮ್ಮ ದೇಶದ ಹೆಗ್ಗಳಿಕೆಯಾಗಿದ್ದವು. ಈಗ ನಮ್ಮ ದೇಶದಲ್ಲಿರುವ ವಿಶ್ವವಿದ್ಯಾಲಯಗಳಲ್ಲಿ ಅಂತಹ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು. ಇಡೀ ವಿಶ್ವವನ್ನು ಮತ್ತೆ ನಮ್ಮ ದೇಶದತ್ತ ಆಕರ್ಷಿಸುವಂತೆ ಮಾಡಬೇಕಿದೆ ಎಂದು ಅವರು ಕರೆ ನೀಡಿದರು.
ತಂದೆ, ತಾಯಿ ಮಕ್ಕಳಿಗೆ ಜನ್ಮ ನೀಡುತ್ತಾರೆ. ಆದರೆ, ಅವರ ಗುರಿಯನ್ನು ನಿರ್ಧರಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿತ್ತು. ಆದರೆ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಈ ವಾದವನ್ನು ಒಪ್ಪುತ್ತಿರಲಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯ ನಿರ್ಧರಿಸಬಹುದು ಎಂಬುದು ಅವರ ಪ್ರಬಲ ಪ್ರತಿಪಾದನೆಯಾಗಿತ್ತು ಎಂದು ಪ್ರಣವ್‌ಮುಖರ್ಜಿ ಹೇಳಿದರು.
ಅಂಬೇಡ್ಕರ್, ವಿವೇಕಾನಂದ ಹಾಗೂ ಮಹಾತ್ಮಗಾಂಧಿ ಸೇರಿದಂತೆ ಎಲ್ಲ ಮಹನೀಯರು ಶಿಕ್ಷಣಕ್ಕೆ ಮಹತ್ವ ನೀಡಿದ್ದರು. ಬೆಂಗಳೂರು ಶಿಕ್ಷಣ, ನವೋದ್ಯಮ, ಐಟಿ ಬಿಟಿ, ಕೈಗಾರಿಕೆಗಳ ಬೆಳವಣಿಗೆಯಲ್ಲಿ ಹೆಸರು ಮಾಡಿದ್ದು, ಈ ಸಂಸ್ಥೆಯ ಸ್ಥಾಪನೆಯಿಂದ ಮತ್ತೊಂದು ಗರಿ ಸೇರ್ಪಡೆಯಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ಸರಕಾರಕ್ಕೆ ಅಭಿನಂದನೆ: ರಾಜ್ಯ ಸರಕಾರವು ಕೌಶಲ ಅಭಿವೃದ್ಧಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿರುವುದು ಶ್ಲಾಘನಾರ್ಹ. ಪ್ರತಿ ವರ್ಷ 1600 ದಶಲಕ್ಷ ಜನರು ಉದ್ಯೋಗ ಮಾರುಕಟ್ಟೆಗೆ ಬರುತ್ತಾರೆ. ಆದರೆ, ಅವರಲ್ಲಿ ಕೌಶಲ ಹೊಂದಿರುವವರ ಸಂಖ್ಯೆ ಮಾತ್ರ ಬಹಳ ಕಡಿಮೆ, ಹೀಗಾಗಿ ಕೌಶಲ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದು ಅತ್ಯಗತ್ಯ ಎಂದು ರಾಷ್ಟ್ರಪತಿ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಉನ್ನತ ಶಿಕ್ಷಣ್ಕಕಾಗಿ ವಿಶ್ವ ದರ್ಜೆಯ ಶಿಕ್ಷಣ ಕೇಂದ್ರವನ್ನು ರಾಜ್ಯ ಸರಕಾರದಿಂದ ಸ್ಥಾಪಿಸಲಾಗುತ್ತಿದೆ. ಆರ್ಥಿಕ ವಿಷಯಗಳ ಅಧ್ಯಯನ ಮತ್ತು ತರಬೇತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನೀಡಲಿದೆ. ವಿಶ್ವದರ್ಜೆಯ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಇಲ್ಲಿ ಬೋಧಿಸಲಾಗುವುದು ಎಂದರು.
ರಾಜ್ಯ ಸರಕಾರವು ಈಗಾಗಲೆ 150 ಕೋಟಿ ರೂ.ಗಳನ್ನು ಸಂಸ್ಥೆಗೆ ಅನುದಾನ ಒದಗಿಸಿದೆ. ಇನ್ನುಳಿದ 75 ಕೋಟಿ ರೂ.ಗಳನ್ನು ಮುಂದಿನ ಐದು ವರ್ಷಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಇದಲ್ಲದೆ, ಪ್ರತಿ ವರ್ಷ 10 ಕೋಟಿ ರೂ.ಗಳಂತೆ ಮುಂದಿನ ಐದು ವರ್ಷಗಳ ವರೆಗೆ ವಿಶೇಷ ಅನುದಾನ ಒದಗಿಸಲಾಗುವುದು ಎಂದು ಅವರು ಹೇಳಿದರು.
ರಾಜ್ಯದ ಅಭಿವೃದ್ಧಿಯ ಹಾದಿಯು ಬಸವಣ್ಣ, ಅಂಬೇಡ್ಕರ್ ಹಾಗೂ ಮಹಾತ್ಮಗಾಂಧಿಯ ಬೋಧನೆಗಳಿಂದ ಸ್ಪೂರ್ತಿ ಹೊಂದಿದೆ. ಬಸವಣ್ಣ ಜಾತಿ ರಹಿತ ಸಮಾಜಕ್ಕಾಗಿ ಹೋರಾಡಿದರು. ಆರ್ಥಿಕ ಹಾಗೂ ಸಾಮಾಜಿಕ ಪ್ರಜಾಪ್ರಭುತ್ವವಿಲ್ಲದೆ ರಾಜಕೀಯ ಪ್ರಜಾಪ್ರಭುತ್ವವನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ನಂಬಿದ್ದರು. ಅದೇ ರೀತಿ ಮಹಾತ್ಮಗಾಂಧಿ ಗ್ರಾಮ ಸ್ವರಾಜ್‌ನಲ್ಲಿ ವಿಶ್ವಾಸವಿರಿಸಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ಆರ್ಥಿಕ ಬೆಳವಣಿಗೆಯ ಲಾಭವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು. ನಾನು ಅರ್ಥಶಾಸ್ತ್ರಜ್ಞನಲ್ಲ. ಆದರೂ, ಹಣಕಾಸು ಸಚಿವನಾಗಿ 12 ಬಜೆಟ್‌ಗಳನ್ನು ನೀಡಿದ್ದೇನೆ. ಪ್ರತಿಬಾರಿ ಬಜೆಟ್ ಸಿದ್ಧಪಡಿಸುವಾಗ ನಮ್ಮ ಗ್ರಾಮೀಣ ಭಾಗದ ಜನತೆ ಅನ್ನಕ್ಕಾಗಿ ಪಡುತ್ತಿದ್ದ ಬವಣೆ ಕಣ್ಣಮುಂದೆ ಬರುತ್ತಿತ್ತು ಎಂದು ಮುಖ್ಯಮಂತ್ರಿ ತಿಳಿಸಿದರು.
ಹೀಗಾಗಿ, ಅನ್ನಭಾಗ್ಯ ಯೋಜನೆ ಜಾರಿಗೆ ತರಲಾಯಿತು. ರಾಜ್ಯದ ಜನತೆಯು ಹಸಿದ ಹೊಟ್ಟೆಯೊಂದಿಗೆ ನಿದ್ರೆಗೆ ಜಾರಿದರೆ, ಊಟವಿಲ್ಲದೆ ಮಕ್ಕಳು ಶಾಲೆಗೆ ಹೋದರೆ, ಮಹಿಳೆಯರು ಅನಾರೋಗ್ಯದಿಂದ ಬಳಲುತ್ತಿದ್ದರೆ ನಾವು ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಹೇಗೆ ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯ ಸರಕಾರವು ಸರ್ವರನ್ನು ಒಳಗೊಂಡ ಬೆಳವಣಿಗೆಯಲ್ಲಿ ನಂಬಿಕೆ ಇಟ್ಟಿದ್ದು, ಕೇವಲ ರಸ್ತೆಗಳು, ಕಟ್ಟಡಗಳ ನಿರ್ಮಾಣದಲ್ಲಿ ಮಾತ್ರ ಅಭಿವೃದ್ಧಿಯನ್ನು ಕಾಣದೆ, ಸಾಮಾಜಿಕವಾಗಿಯೂ ಮನುಷ್ಯರ ಜೀವನಮಟ್ಟ ಸುಧಾರಣೆಗೆ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.
ಸನ್ಮಾನ: ರಾಜ್ಯದ ಪರವಾಗಿ ರಾಷ್ಟ್ರಪತಿ ಪ್ರಣವ್‌ಮುಖರ್ಜಿಗೆ ಮೈಸೂರು ಪೇಟಾ, ಶಾಲು ಹಾಗೂ ಹಾರ ಹಾಕಿ, ಬುದ್ಧನ ಗಂಧದ ಪ್ರತಿಮೆಯನ್ನು ನೀಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸನ್ಮಾನಿಸಿದರು.