ಉಪ ಚುನಾವಣೆಯಲ್ಲಿ ಸೋಲು: ಬಿಎಸ್‌ವೈಗೆ ಅಮಿತ್ ಷಾ ಬುಲಾವ್
ಬೆಂಗಳೂರು, ಎ. 14: ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ತಮ್ಮನ್ನು ಭೇಟಿ ಮಾಡುವಂತೆ ಸೂಚಿಸಿದ್ದಾರೆ.
ಒಡಿಸ್ಸಾದ ಭುವನೇಶ್ವರದಲ್ಲಿ ಎ.15ರಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ ನಡೆಯಲಿದ್ದು, ಸಭೆಗೆ ಆಗಮಿಸುವಂತೆ ಯಡಿಯೂರಪ್ಪನವರಿಗೆ, ಅಮಿತ್ ಷಾ ಸೂಚಿಸಿರುವ ಹಿನ್ನೆಲೆಯಲ್ಲಿ ಬಿಎಸ್‌ವೈ ಶುಕ್ರವಾರ ರಾತ್ರಿ ಭುವನೇಶ್ವರಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎನ್ನಲಾಗಿದೆ.
ಎರಡು ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದ ಬಗ್ಗೆ ವರದಿ ನೀಡಲು ವರಿಷ್ಠರು ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ, ಅಮಿತ್ ಷಾಗೆ ಪಕ್ಷದ ಅಭ್ಯರ್ಥಿಗಳ ಸೋಲಿನ ಬಗ್ಗೆ ವಿಸ್ತೃತ ವರದಿಯನ್ನು ಸಲ್ಲಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆಪರೇಷನ್‌ಗೆ ಬ್ರೇಕ್: ಉಪ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅತೃಪ್ತರನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೆಳೆದುಕೊಳ್ಳುವ ಕಾರ್ಯಕ್ಕೂ ವರಿಷ್ಠರು ಬ್ರೇಕ್ ಹಾಕುವ ಸಾಧ್ಯತೆಗಳಿವೆ.
ಉಪ ಚುನಾವಣೆ ಸಂದರ್ಭದಲ್ಲೆ ಹಿರಿಯ ಮುಖಂಡ ಎಸ್ಸೆಂ ಕೃಷ್ಣ, ಶ್ರೀನಿವಾಸ ಪ್ರಸಾದ್ ಮತ್ತು ಕುಮಾರ ಬಂಗಾರಪ್ಪ ಪಕ್ಷಕ್ಕೆ ಸೇರ್ಪಡೆಗೊಂಡರೂ, ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲಿಲ್ಲ. ಹೀಗಾಗಿ ಆಪರೇಷನ್ ಕಮಲಕ್ಕೆ ವರಿಷ್ಠರು ತಾತ್ಕಾಲಿಕ ಬ್ರೇಕ್ ಹಾಕಲಿದ್ದಾರೆಂದು ಮೂಲಗಳು ತಿಳಿಸಿವೆ.